Index   ವಚನ - 73    Search  
 
ಅಯ್ಯ, ಇನ್ನು ಪ್ರವೃತ್ತಿ-ನಿವೃತ್ತಿ ಅಧೋಕುಂಡಲಿ- ಊರ್ಧ್ವಕುಂಡಲಿಗಳೆಂಬ ಉಭಯಮಾರ್ಗವ ಶಿವಾಜ್ಞೆಯಿಂದ ತೀರ್ಚಿಸಿ, ಶಿವಯೋಗ, ಶಿವಾಚಾರ, ಶಿವಭಕ್ತಿ, ಶಿವಾನಂದಪರಿಣಾಮದಲ್ಲಿ ಚರಿಸುವ ಮಧ್ಯಕುಂಡಲಿಸ್ವರೂಪವಾದ ಮಹಾಶೇಷನ ಭೇದವೆಂತೆಂದಡೆ : ಷೋಡಶ ವರ್ಣವೆ ಅಂಗವಾಗಿರ್ಪುದಯ್ಯ. ಸರ್ವಾಚಾರಸಂಪತ್ತಿನಾಚರಣೆಯೆ ಪ್ರಾಣವಗಿರ್ಪುದಯ್ಯ. ಚತುರ್ದಶಪ್ರಣಮಂಗಳೆ ತತ್ಸಂಗವಾಗಿರ್ಪುದಯ್ಯ. ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲವೆ ವಸ್ತ್ರಾಭರಣವಾಗಿರ್ಪುದಯ್ಯ. ಹರಗುರುವಾಕ್ಯವೆ ನಡೆನುಡಿಯಾಗಿರ್ಪುದಯ್ಯ. ಪಂಚಾಚಾರಂಗಳೆ ವಾಹನವಾಗಿರ್ಪುದಯ್ಯ. ಕರುಣ-ವಿನಯ-ಸಮತಾ-ಶುದ್ಧ-ಸಿದ್ಧ-ಪ್ರಸಿದ್ಧವೆ ಪಿತಮಾತೆಯಾಗಿರ್ಪುದಯ್ಯ. ಚತುರ್ವರ್ಣ ಮೊದಲಾಗಿ ಬಾವನ್ನವರ್ಣಂಗಳೆ ಬಂಧುಬಳಗವಾಗಿರ್ಪುದಯ್ಯ. ಷಡಕ್ಷರಮಂತ್ರ ಮೊದಲಾಗಿ ನೂರೆಂಟು ಮಂತ್ರಮಾಲಿಕೆಯ ಒಡಹುಟ್ಟಿದರಾಗಿರ್ಪುದಯ್ಯ. ಸಪ್ತಕೋಟಿ ಮಹಾಮಂತ್ರಂಗಳೆ ನಂಟರಾಗಿರ್ಪುದಯ್ಯ. ಷೋಡಶಭಕ್ತಿಗಳೆ ಅರ್ಧಾಂಗಿಯಾಗಿರ್ಪುದಯ್ಯ. ನೂರೆಂಟು ಸಕೀಲು ಮೊದಲಾಗಿ ಸಮಸ್ತಸಕೀಲಂಗಳೆ ಮಂದಿರವಾಗಿರ್ಪುದಯ್ಯ. ಸ್ವಾನುಭಾವಸೂತ್ರವೆ ನಿತ್ಯತೃಪ್ತಿಯಾಗಿರ್ಪುದಯ್ಯ. ಮಹಾಪ್ರಕಾಶಸ್ವರೂಪವಾದ ಚಿದ್ಬೆಳಗೆ ದೈವವಾಗಿರ್ಪುದಯ್ಯ. ಷೋಡಶಾವಧಾನಂಗಳೆ ಅವಯವಂಳಾಗಿರ್ಪುದಯ್ಯ. ನಿಜನೈಷ್ಠೆ, ನಿರ್ಲಜ್ಜೆ, ನಿರಾಸೆಯೆಂಬ ನಿಷ್ಪ್ರಪಂಚವೆ ಧನಧಾನ್ಯವಾಗಿರ್ಪುದಯ್ಯ. ಇಂತು ನಿಷ್ಕಳಂಕ ಪರಮಾನಂದವೆಂಬ ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪದಿಂದ ಕನ್ನಡಿಯ ಪ್ರತಿಬಿಂಬದಂತೆ, ಇಹಪರಂಗಳೆಂಬ ಅಧೋಕುಂಡಲಿ ಊರ್ಧ್ವಕುಂಡಲಿಯೆಂಬ ಉಭಯಮಧ್ಯದಲ್ಲಿ ನೆಲಸಿರ್ಪ ಪರತತ್ವವೆ ಶಿವಭಕ್ತನೆಂಬ ಮಧ್ಯನಾಮವುಳ್ಳ ಮಹಾಶೇಷ ನೋಡ ಸಂಗನಬಸವೇಶ್ವರ.