Index   ವಚನ - 74    Search  
 
ಅಯ್ಯ, ಇನ್ನು ಹಠಯೋಗವ ಮರದು ಶಿವಯೋಗದಲ್ಲಿ ನಿಂತ ಭೇದವೆಂತೆಂದಡೆ : ಆ ನಿಲುಕಡೆಯ ಶ್ರೀಗುರುಕರುಣಕಟಾಕ್ಷೆಯಿಂದ ನಿರೂಪಿಸೇವು ಕೇಳಯ್ಯ, ವರಕುಮಾರದೇಶಿಕೋತ್ತಮನೆ. ವಾಮಭಾಗದ ಚಂದ್ರನಾಳ, ಚಂದ್ರನೇತ್ರ, ವಾಮಕರ್ಣದ್ವಾರಂಗಳು ಇವು ಮೂರು ಈಡನಾಡಿಯೆನಿಸುವುದಯ್ಯ. ದಕ್ಷಿಣಭಾಗದ ಸೂರ್ಯನಾಳ, ಸೂರ್ಯನೇತ್ರ, ದಕ್ಷಿಣ ಕರ್ಣದ್ವಾರಂಗಳು ಇವು ಮೂರು ಪಿಂಗಳನಾಡಿಯೆನಿಸುವುದಯ್ಯ. ಅಧೋದ್ವಾರ, ಗುಹ್ಯದ್ವಾರ, ಜೀಹ್ವಾದ್ವಾರ ಇವು ಮೂರು ಸುಷುಮ್ನನಾಡಿಯೆನಿಸುವುದಯ್ಯ. ಮಣಿಪೂರಕನಾಭಿ, ವಿಶುದ್ಧಿನಾಭಿ, ಬ್ರಹ್ಮನಾಭಿ ಇವು ಮೂರು ಇಪ್ಪತ್ತೆರಡುಸಾವಿರನಾಡಿಗಳಿಗೆ ಮೂಲಸೂತ್ರವಾದ ಮಧ್ಯನಾಡಿಯೆನಿಸುವುದಯ್ಯ. ಇಂತೀ ದ್ವಾದಶದ್ವಾರಂಗಳಲ್ಲಿ ಚರಿಸುವ ಮನ್ಮಥವಿಕಾರಮಂ ಗುರೂಪಾವಸ್ತೆಯಿಂದ ಹಿಂದುಮಾಡಿ, ತನ್ನ ಸತ್ಯವೆ ಮುಂದಾಗಿ, ತನ್ನ ನಡೆನುಡಿಗಳ ತನ್ನ ತಾನೆ ವಿಚಾರಿಸಿ, ಸದ್ಗುರುಲಿಂಗಜಂಗಮದಿಂದ ಶಿವದೀಕ್ಷೆಯ ಪಡದು ಲಿಂಗಾಂಗಸಂಬಂಧಿಯಾಗಿ, ಆ ಲಿಂಗಾಂಗಚೈತನ್ಯಸ್ವರೂಪವಾದ ಪಾದೋದಕ ಪ್ರಸಾದ ಮಂತ್ರದಿಂದ ಆ ತ್ರಿವಿಧನಾಡಿಗಳು ಮೊದಲಾಗಿ ದ್ವಾದಶನಾಡಿಗಳೆ ಕಡೆಯಾದ ಸಮಸ್ತನಾಡಿಗಳೆಲ್ಲ ಪವಿತ್ರಸ್ವರೂಪವಾಗಿ, ಸರ್ವಾವಸ್ಥೆಯಲ್ಲಿ ಚಿದ್ಘನಮಹಾಲಿಂಗವ ಅಷ್ಟವಿಧಾರ್ಚನೆ, ಷೋಡಶೋಪಚಾರವನೊಡಗೂಡಿ, ಪರಿಪರಿಯಿಂದರ್ಚಿಸಿ, ಆಚಾರಭ್ರಷ್ಟರ ತ್ರಿಕರಣಂಗಳಿಂದ ಸೋಂಕದೆ, ಅಂಗ ಕರಣಂಗಳೆಲ್ಲ ಲಿಂಗಕಿರಣಂಗಳಾಗಿ, ಸತ್ಕ್ರಿಯಾಜ್ಞಾನಾನಂದವೆ ಪ್ರಭಾವಿಸಿ, ಶ್ರೀಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸದ್ವರ್ತನೆಯೆಂಬ ಚಿದೈಶ್ವರ್ಯದಲ್ಲಿ ಸಂತೃಪ್ತರಾಗಿ, ನಿಂದ ನಿಲುಕಡೆಯಲ್ಲಿ ಪೂರ್ಣಸ್ವರೂಪ ನಿಜಶಿವಯೋಗಿಗಳು ನಿಮ್ಮ ಶರಣರು ನೋಡ ಸಂಗನಬಸವೇಶ್ವರ.