Index   ವಚನ - 77    Search  
 
ಅಯ್ಯ, ನಿರಾಲಂಬ ನಿಃಕಳಂಕ ನಿಃಪ್ರಪಂಚತ್ವದಿಂದ ನಾಲ್ವತ್ತೆಂಟು ಪ್ರಣಮಸ್ಮರಣೆಯಿಂದ ಏಕಾದಶಲಿಂಗಂಗಳಿಗೆ ಏಕಾದಶಪ್ರಸಾದವ ಸಮರ್ಪಿಸಿ, ತಾನಾ ಸಂತೃಪ್ತಿಮಹಾಪ್ರಸಾದದಲ್ಲಿ ಲೋಲುಪ್ತನಾದಡೆ ನಿಜಪ್ರಸಾದಿಯೆಂಬೆ ನೋಡ. ಅದರ ವಿಚಾರವೆಂತೆಂದಡೆ : ನಾಲ್ವತ್ತೆಂಟು ಪ್ರಣವದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಆಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದವ ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಸುಚಿತ್ತ, ಸುಬುದ್ಧಿ, ನಿರುಪಾಧಿಕಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿನಿಃಕಳಂಕ ಗುರುಬಸವರಾಜನೆಂಬೆ ನೋಡ. ಛತ್ತೀಶಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಪಂಚೇಂದ್ರಿಯವಿರಹಿತಪ್ರಸಾದ, ಕರಣಚತುಷ್ಟಯವಿರಹಿತಪ್ರಸಾದ, ಲಿಂಗಪ್ರಸಾದವ ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ನಿರಹಂಕಾರ, ಸುಮನ, ನಿರಾಲಂಬಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿಃಕಾಮ ಶೂನ್ಯಲಿಂಗಸ್ವರೂಪ ಚೆನ್ನಬಸವರಾಜನೆಂಬೆ ನೋಡ ! ಇಪ್ಪತ್ತುನಾಲ್ಕು ಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಸಮತಾಪ್ರಸಾದ-ಪ್ರಸಾದಿಯಪ್ರಸಾದ-ಜಂಗಮಪ್ರಸಾದವ ಪ್ರಸಾದಲಿಂಗ-ಮಹಾಲಿಂಗ-ಭಾವಲಿಂಗದೇವಂಗೆ ಸುಜ್ಞಾನ, ಸದ್ಭಾವ, ನಿಃಪ್ರಪಂಚಹಸ್ತದಿಂದ ಸಮರ್ಪಿಸಿ, ಆ ಪರಿಣಾಮಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿರಂಜನ ಜಂಗಮ ಸ್ವರೂಪ ಪ್ರಭುದೇವರೆಂಬೆ ನೋಡ. ಇನ್ನು ಉಳಿದ ದ್ವಾದಶಪ್ರಣಮಸ್ಮರಣೆಯಿಂದ ಸದ್ಭಾವಪ್ರಸಾದ-ಜ್ಞಾನಪ್ರಸಾದವ ಇಂತು ನವಲಿಂಗಪ್ರಸಾದ ಪಾದೋದಕಂಗಳ ಸಂತೃಪ್ತಿಯಲ್ಲಿ ಸಾಕಾರ ನಿರಾಕಾರನಾದ ಪರತತ್ವಜ್ಯೋತಿರ್ಮಯಲಿಂಗದೇವಂಗೆ ನಿಜಾನಂದಹಸ್ತದಿಂದ ಸಮರ್ಪಿಸಿ, ಮತ್ತಾ ಅನಾದಿಕುಳಸನ್ಮತವಾದ ದಶವಿಧಪಾದೋದಕ, ಏಕಾದಶಪ್ರಸಾದದಲ್ಲಿ ಕೂಡಿ, ಘನಸಾರದಂತಾದಡೆ ಅನಾದಿಪೂರ್ಣಮಯ ನಿಜವಸ್ತು ತಾನೆ ನೋಡ, ಸಂಗನಬಸವೇಶ್ವರ.