Index   ವಚನ - 76    Search  
 
ಅಯ್ಯ, ನಿರ್ವಂಚಕತ್ವದಿಂದ ದಶವಿಧಲಿಂಗಗಳಿಗೆ ಏಕವಿಂಶತಿ ಮಂತ್ರಸ್ಮರಣೆಯಿಂದ ದಶವಿಧಪಾದೋದಕವನರ್ಪಿಸಿ, ಸಂತೃಪ್ತಾನಂದಜಲದಲ್ಲಿ ಪರಿಣಾಮಿಸಬಲ್ಲಡೆ ನಿಜಪ್ರಸಾದಿಯೆಂಬೆನಯ್ಯ. ಅದರ ವಿಚಾರವೆಂತೆಂದಡೆ : ಏಕವಿಂಶತಿ ಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ ಸ್ವರ್ಶನೋದಕ ಅವಧಾರೋದಕ-ಗುರುಪಾದೋದಕವ ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಅರ್ಪಿಸಿ, ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ ಅನಾದಿಗುರುಲಿಂಗಸ್ವರೂಪ ಬಸವಣ್ಣನೆಂಬೆ ನೋಡ. ದಶಪಂಚಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ ಆಪ್ಯಾಯನೋದಕ-ಹಸ್ತೋದಕ-ಲಿಂಗಪಾದೋದಕವ ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ಸಮರ್ಪಿಸಿ ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ ಅನಾದಿಲಿಂಗಸ್ವರೂಪ ಚೆನ್ನಬಸವಣ್ಣನೆಂಬೆ ನೋಡ. ನವವಿಧಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ ಪರಿಣಾಮೋದಕ-ನಿರ್ನಾಮೋದಕ-ಜಂಗಮಪಾದೋದಕವ ಪ್ರಸಾದಲಿಂಗ-ಮಹಾಲಿಂಗ ಭಾವಲಿಂಗದೇವಂಗೆ ಸಮರ್ಪಿಸಿ, ತಾನಾ ಸಂತೃಪ್ತಿಯಲ್ಲಿ ಲೋಲುಪ್ತನಾದಡೆ ಅನಾದಿಜಂಗಮಸ್ವರೂಪ ಅಲ್ಲಮಪ್ರಭುರಾಯನೆಂಬೆ ನೋಡಾ. ಇನ್ನು ಉಳಿದ ತ್ರಿವಿಧಪ್ರಣಮಸ್ಮರಣೆಯಿಂದ ನವವಿಧೋದಕವನೊಳಕೊಂಡ ಸತ್ಯೋದಕವ ನವವಿಧಲಿಂಗಕ್ಕೆ ಮಾತೃಸ್ವರೂಪವಾದ ನಿಃಕಲಪರತತ್ವಲಿಂಗದೇವಂಗೆ ಸಮರ್ಪಿಸಿ, ನಿತ್ಯತೃಪ್ತತ್ವದಿಂದ ಸರ್ವಾವಸ್ಥೆಯ ನೀಗಬಲ್ಲಡೆ ಅನಾದಿಶರಣಪ್ರಸನ್ನ ಮೂರ್ತಿಯೆಂಬೆ ನೋಡ ಸಂಗನಬಸವೇಶ್ವರ.