Index   ವಚನ - 79    Search  
 
ಅಯ್ಯ, ಗುರು ಜಂಗಮದ ಪಾದೋದಕ ಪ್ರಸಾದವ ಚಿದ್ಘನಲಿಂಗಕ್ಕೆ ಅರ್ಪಿತವ ಮಾಡಿಕೊಂಬಲ್ಲಿ ಆ ಲಿಂಗ ಮೊದಲೊ? ಗುರುಚರ ಮೊದಲೊ? ಆ ವಿಚಾರವೆಂತೆಂದಡೆ : ಅನಾದಿಬೀಜಲಿಂಗ ಆದಿಬೀಜ ಗುರುಚರ, ಇಂತೀ ಉಭಯವನರಿತಲ್ಲಿ ಗುರುಚರಕ್ಕೆ ಚಿದ್ಘನಲಿಂಗವೆ ಆದಿಯನಾದಿ, ಚಿದ್ಘನಲಿಂಗಕ್ಕೆ ಗುರುಚರವೆ ಆದಿ ಅನಾದಿ. ಇಂತೀ ವಿಚಾರವ ತಿಳಿದಲ್ಲಿ ಚಿದ್ಘನಲಿಂಗವ ಬಿಟ್ಟು ಗುರುಚರವುಂಟೆ? ಗುರುಚರವ ಬಿಟ್ಟು ಚಿದ್ಘನಲಿಂಗವುಂಟೆ? ಇವು ಮೂರು ಒಂದೆ ವಸ್ತುವಯ್ಯ. ಅದರಿಂದ ಆಚರಣೆಗೋಸ್ಕರ ಗುರುಭಕ್ತನಾಗಿ ಪೂಜೆಗೆ ನಿಂತಿರ್ಪುದಯ್ಯ. ಲಿಂಗಜಂಗಮವಾಗಿ ಪೂಜ್ಯಕ್ಕೆ ನಿಂತಿರ್ಪುದಯ್ಯ. ಗುರುಭಕ್ತನಾಗಿರ್ಪುದಯ್ಯ ; ಲಿಂಗಜಂಗಮವಾಗಿರ್ಪುದಯ್ಯ. ಇಚ್ಛೆ-ಅನಿಚ್ಛೆ, ಬೇಕು-ಬೇಡೆಂಬುದೆ ಗುರುಭಕ್ತರೂಪು. ಇಚ್ಛೆ-ಅನಿಚ್ಛೆ, ಬೇಕು-ಬೇಡೆನ್ನದೆ ಗುರುಭಕ್ತರಿಂದ ಬಂದುದ ಕೈಕೊಂಡು ಸಂತೃಪ್ತಿಯಲ್ಲಿರ್ಪುದೆ ಲಿಂಗಜಂಗಮ. ಇದನರಿದ ಮೇಲೆ ಮತ್ತೊಂದು ಪ್ರಕಾರ ಚಿಕ್ಕದಂಡನ ಪ್ರಸಾದವಾಕ್ಯವುಂಟು! ಅದರ ವಿಚಾರವೆಂತೆಂದಡೆ- ಗುರು ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ. ಅದೇನು ಕಾರಣವೆಂದಡೆ, ಅನಾದಿಲಿಂಗವ ತೋರಲರಿಯನಾಗಿ, ಲಿಂಗ ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ. ಅದೇನು ಕಾರಣವೆಂದಡೆ, ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೆ ಒಳಗಾಯಿತ್ತಾಗಿ. ಮತ್ತೆಂತುಂಟು ಗುರುಲಿಂಗ ಜಂಗಮಪ್ರಸಾದ? ಅನಾದಿಲಿಂಗವನರಿತು ಅಷ್ಟತನುವೆ ಅಷ್ಟವಿಧಾರ್ಚನೆಯಾಗಿ, ಮಲಮಾಯಪಾಶದಾಸೆಯ ನೀಗಿ ನಿಂದಡೆ ಗುರು-ಲಿಂಗ-ಜಂಗಮ! ಆತ ತಟ್ಟಿದ್ದು ಮುಟ್ಟಿದ್ದೆಲ್ಲ ಮಹಾಪ್ರಸಾದ ನೋಡ. ಲಿಂಗವಿಲ್ಲದ ಜಂಗಮ, ಜಂಗಮವಿಲ್ಲದ ಲಿಂಗ; ಈ ಲಿಂಗಜಂಗಮ ಜಂಗಮಲಿಂಗವೆಂಬ ವಿಚಾರವನರಿಯದೆ ಗುರುಭಕ್ತರೆಂತಹುದೊ? ಮರುಳೆ! ಲಿಂಗಜಂಗಮದಲ್ಲಿ ಚಿದ್ಘನತೀರ್ಥವ ಕೊಂಡು, ಜಂಗಮಲಿಂಗದಲ್ಲಿ ಚಿದ್ಘನಪ್ರಸಾದವ ಮುಗಿಯಬಲ್ಲಾತನೆ ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಗುರುಭಕ್ತಶರಣ. ಪ್ರಸಾದಲಿಂಗಮೂರ್ತಿ ತಾನೆ ನೋಡ ಸಂಗನಬಸವೇಶ್ವರ.