Index   ವಚನ - 80    Search  
 
ಅಯ್ಯ, ಏಕವಿಂಶತಿದೀಕ್ಷೆಯ ನಿಲುಕಡೆ, ದ್ವಾದಶಾಚಾರ ಮೊದಲಾಗಿ ಸರ್ವಾಚಾರಸಂಪತ್ತಿನಾಚರಣೆಯ ಅರ್ಪಿತಾವಧಾನವನರಿದಾಚರಿಸಿದಡೆ ನಿನ್ನ ಸರ್ವಾಂಗವೆಲ್ಲ ಪಾದೋದಕಪ್ರಸಾದ ಮಂತ್ರಮಯ ಪರಬ್ರಹ್ಮಸ್ವರೂಪು ನೋಡ. ಅದರ ವಿಚಾರವೆಂತೆಂದಡೆ: ನಿನ್ನ ಕಾಯದ ಮಧ್ಯದಲ್ಲಿ ಅನಾದಿಗುರು ಬಸವೇಶ್ವರಸ್ವಾಮಿಗಳೆ ಇಷ್ಟಲಿಂಗಮಂತ್ರ, ಚಿದ್ವಿಭೂತಿ, ರುದ್ರಾಕ್ಷೆ, ದೀಕ್ಷಪಾದೋದಕ, ಸುದ್ಧಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಮನದ ಮಧ್ಯದಲ್ಲಿ ಅನಾದಿಚರರೂಪ ಚನ್ನಬಸವೇಶ್ವರಸ್ವಾಮಿಗಳೆ ಪ್ರಾಣಲಿಂಗ, ಸಪ್ತಕೋಟಿ ಮಹಾಮಂತ್ರ, ಶಿಕ್ಷಾಪಾದೋದಕ, ಸಿದ್ಧಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಭಾವದ ಮಧ್ಯದಲ್ಲಿ ಅನಾದಿಪರಶಿವಸ್ವರೂಪ ಅಲ್ಲಮಪ್ರಭುಸ್ವಾಮಿಗಳೆ ಭಾವಲಿಂಗ, ಅಗಣಿತಮಂತ್ರ, ಜ್ಞಾನಪಾದೋದಕ, ಪ್ರಸಿದ್ಧಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಆಧಾರಚಕ್ರದ ಮಧ್ಯದಲ್ಲಿ ಆಚಾರಮೂರ್ತಿ ಮಡಿವಾಳರಸ್ವಾಮಿಗಳೆ ಪಂಚಾಚಾರಮೂರ್ತಿ, ಆಚಾರಲಿಂಗಮಂತ್ರ, ಸ್ಪರ್ಶನೋದಕ, ಆಪ್ಯಾಯನಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಸ್ವಾದಿಷ್ಠಾನಚಕ್ರದ ಮಧ್ಯದಲ್ಲಿ ಸತ್ಕ್ರಿಯಾಮೂರ್ತಿ ಮರುಳಶಂಕಸ್ವಾಮಿಗಳೆ ಮಂತ್ರಮೂರ್ತಿ, ಗುರುಲಿಂಗಮಂತ್ರ, ಅವಧಾರೋದಕ, ಸಮಯಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಮಣಿಪೂರಕಚಕ್ರದಮಧ್ಯದಲ್ಲಿ ಸಮ್ಯಜ್ಞಾನಮೂರ್ತಿ ಸಿದ್ಧರಾಮೇಶ್ವರಸ್ವಾಮಿಗಳೆ ನಿರೀಕ್ಷಣಮೂರ್ತಿ, ಶಿವಲಿಂಗಮಂತ್ರ, ಆಪ್ಯಾಯನೋದಕ, ಪ್ರಸಾದಿಯ ಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಅನಾಹತಚಕ್ರದಮಧ್ಯದಲ್ಲಿ ಷಡ್ಗುಣೈಶ್ವರ್ಯ ಸಂಪನ್ನೆ ನೀಲಲೋಚನೆತಾಯಿಗಳೆ ಯಜನ ಸ್ವರೂಪಮೂರ್ತಿ, ಜಂಗಮಲಿಂಗಮಂತ್ರ, ಹಸ್ತೋದಕ, ಪಂಚೇಂದ್ರಿಯವಿರಹಿತಪ್ರಸಾದವಾಗಿ ನೆಲಸಿರ್ಪರು, ನೋಡ. ನಿನ್ನ ವಿಶುದ್ಧಿಚಕ್ರದಮಧ್ಯದಲ್ಲಿ ಪರಮವಿರಾಗತವನ್ನುಳ್ಳ ಮಹಾದೇವಿತಾಯಿಗಳೆ ಈಳನಾಸ್ವರೂಪವಾದ ಪ್ರಸಾದಲಿಂಗಮಂತ್ರ, ಪರಿಣಾಮೋದಕ, ಕರಣಚತುಷ್ಟಯವಿರಹಿತ ಪ್ರಸಾದವಾಗಿ ನೆಲಸಿರ್ಪರು, ನೋಡ. ನಿನ್ನ ಆಜ್ಞಾಚಕ್ರದ ಮಧ್ಯದಲ್ಲಿ ಷಟ್ಸ್ಥಲ ಸಂಪನ್ನೆಯಾದಂಥ ಅಕ್ಕನಾಗಲಾಂಬಿಕೆ ತಾಯಿಗಳೆ ವೇಧಾಸ್ವರೂಪವಾದ ಮಹಾಲಿಂಗಮಂತ್ರ, ನಿರ್ನಾಮೋದಕ, ಸಮತಾಪ್ರಸಾದವಾಗಿ, ನೆಲಸಿರ್ಪರು ನೋಡ. ನಿನ್ನ ಬ್ರಹ್ಮರಂಧ್ರಚಕ್ರದ ಮಧ್ಯದಲ್ಲಿ ಸರ್ವಾಚಾರಸಂಪನ್ನೆಯಾದಂಥ ಮುಕ್ತಾಯಕ್ಕಗಳೆ ನಿರಾಲಂಬಮೂರ್ತಿಯಾದಂಥ, ನಿಃಕಳಲಿಂಗಮಂತ್ರ,ಸತ್ಯೋದಕ, ಸದ್ಭಾವಪ್ರಸಾದ-ಜ್ಞಾನಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಶಿಖಾಪಶ್ಚಿಮಚಕ್ರದಮಧ್ಯದಲ್ಲಿ ಪರಿಪೂರ್ಣನಂದಮೂರ್ತಿ ಅಜಗಣ್ಣತಂದೆಗಳೆ ನಿಃಪ್ರಪಂಚಮೂರ್ತಿ ಶೂನ್ಯನಿರಂಜನಲಿಂಗಮಂತ್ರ, ಕರುಣಜಲ-ವಿನಯಜಲ-ಸಮತಾಜಲ, ಚಿತ್ಕಲಾಪ್ರಸಾದ-ನಿಜಪ್ರಸಾದ-ಚಿದ್ರೂಪಪ್ರಸಾದವಾಗಿ ನೆಲಸಿರ್ಪರು ನೋಡ. ಇಂತು ನಿನ್ನ ಪ್ರಾಣಕಳಾಚೈತನ್ಯವಾಗಿ ನಿನ್ನ ಸರ್ವಾಂಗವೆಲ್ಲ ಪ್ರಮಥಗಣ ಪಾದೋದಕ ಪ್ರಸಾದಲಿಂಗ ಮಂತ್ರವಾಗಿರ್ಪುದು ನೋಡ ಸಂಗನಬಸವೇಶ್ವರ.