Index   ವಚನ - 85    Search  
 
ಅಯ್ಯ, ತಾರಕಾಕೃತಿ, ನಕಾರಪ್ರಣಮ, ವೇಣುನಾದ, ಆಧಾರಚಕ್ರ, ಪೀತವರ್ಣ, ಭಕ್ತಿಸ್ಥಲ, ಸ್ಥೂಲತನು, ಸುಚಿತ್ತಹಸ್ತ, ಆಚಾರಲಿಂಗ, ಘ್ರಾಣಮುಖ, ಶ್ರದ್ಧಾಭಕ್ತಿ, ಸುಗಂಧ ಪದಾರ್ಥ, ಸುಗಂಧಪ್ರಸಾದ, ಬ್ರಹ್ಮಪೂಜಾರಿ, ಬ್ರಹ್ಮನಧಿದೇವತೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಪೂರ್ವದಿಕ್ಕು, ಋಗ್ವೇದ, ಪೃಥ್ವಿಯ ಅಂಗ, ಜೀವಾತ್ಮ, ಕ್ರಿಯಾಶಕ್ತಿ, ನಿವೃತ್ತಿಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನಾಧಾರಚಕ್ರವೆಂಬ ಶ್ರೀಶೈಲಪರ್ವತ ಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಪಂಚಾಚಾರಸ್ವರೂಪವಾದ ಆಚಾರಲಿಂಗವೆ ಮಲ್ಲಿಕಾರ್ಜುನಲಿಂಗವೆಂದು ತನುತ್ರಯವ ಮಡಿಮಾಡಿ, ಶಿವಾನಂದವೆಂಬ ಜಲದಿಂ ಮಜ್ಜನಕ್ಕೆರದು, ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ ಚಿತ್ತ ಸುಚಿತ್ತವಾದಕ್ಷತೆಯನಿಟ್ಟು, ಅಲ್ಲಿಹ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಪೀತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಜಾಗ್ರವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿಃಕಾಮವೆಂಬಾಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಆಚಾರಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ಆಚಾರಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ನಂ ನಂ ನಂ ನಂ ನಂ ನಂ ಎಂಬ ನಕಾರ ಷಡ್ವಿಧಮಂತ್ರಗಳಿಂದ ನಮಸ್ಕರಿಸಿ, ಈ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಬ್ಬೆರಗಿನಿಂದ ಆಚರಿಸಬಲ್ಲಾತನೆ ಶ್ರದ್ಧಾಭಕ್ತಿಯನುಳ್ಳ ಸದ್ಭಕ್ತ ನೋಡ, ಸಂಗನಬಸವೇಶ್ವರ.