Index   ವಚನ - 91    Search  
 
ಅಯ್ಯ, ನಿಃಕಲಾಕೃತಿ, ಓಂಕಾರಪ್ರಣಮ, ಭ್ರಮರನಾದ, ಬ್ರಹ್ಮಚಕ್ರ, ಜ್ಯೋತಿವರ್ಣ, ನಿಃಕಳಂಕಸ್ಥಲ, ಚಿದ್ರೂಪತನು, ಸ್ವತಂತ್ರಹಸ್ತ, ನಿಃಕಳಂಕಲಿಂಗ, ಬ್ರಹ್ಮರಂದ್ರಮುಖ, ಸದ್ಭಾವಭಕ್ತಿ, ಪರಮಾನಂದಪದಾರ್ಥ, ಪರಮಾನಂದಪ್ರಸಾದ, ಶ್ರೀಗುರು ಪೂಜಾರಿ, ಶ್ರೀಗುರು ಅಧಿದೇವತೆ, [ಅಗಮ್ಯಸಾದಾಖ್ಯ] ಅಗಮ್ಯವೆಂಬ ಲಕ್ಷಣ, ಅಪ್ರಮಾಣವೆಂಬ ಸಂಜ್ಞೆ, ಹೃತ್ಕಮಲದಿಕ್ಕು, ಧನುರ್ವೇದ, ಚಿತ್ಸೂರ್ಯನೆ ಅಂಗ, ಮಹಾ ಆತ್ಮ, ಅನಾಮಯಶಕ್ತಿ, ನಿರ್ವಂಚಕ ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಬ್ರಹ್ಮರಂಧ್ರಚಕ್ರವೆಂಬ ರಜತಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವದೀಕ್ಷಾಸ್ವರೂಪವಾದ ನಿಃಕಲಲಿಂಗವೆ ರಜತೇಶ್ವರಲಿಂಗವೆಂದು ಗುಣತ್ರಯವ ಮಡಿಮಾಡಿ, ಸ್ವತಂತ್ರವೆಂಬ ಜಲದಿಂ ಮಜ್ಜನಕ್ಕೆರದು, ಸೂರ್ಯ ನಿವೃತ್ತಿಯಾದ ಗಂಧವ ಧರಿಸಿ, ಪರತಂತ್ರ ಸ್ವತಂತ್ರವಾದಕ್ಷತೆಯನಿಟ್ಟು, ಅಲ್ಲಿಹ ಸಹಸ್ರದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿಃಕಳಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿರಾಭಾರವೆಂಬಾಭರಣವ ತೊಡಿಸಿ, ಪರಮಾನಂದವೆಂಬ ನೈವೇದ್ಯವನರ್ಪಿಸಿ, ಸದ್ಭಾವವೆಂಬ ತಾಂಬೂಲವನಿತ್ತು, ಅಂತು ನಿಃಕಳಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ದಶಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ನಿಃಕಳಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ನಿಃಕಳಲಿಂಗದ ಪೂಜೆಯ ಸಮಾಪ್ತವ ಮಾಡಿ, ಕ್ರಿಯಾಜಪವೆಂಬ ದ್ವಾದಶಪ್ರಣವಮಂತ್ರಂಗಳಿಂದೆ ನಮಸ್ಕರಿಸಿ, ಆ ನಿಃಕಳಲಿಂಗವೆ ತಾನೆಂದರಿದು ಕೂಡಿ ಎರಡಳಿದು ಸ್ವತಂತ್ರನಾಗಿ ಆಚರಿಸಬಲ್ಲಾತನೆ ಸದ್ಭಾವಭಕ್ತಿಯನುಳ್ಳ ನಿಃಕಳಂಕ ನೋಡ ಸಂಗನಬಸವೇಶ್ವರ.