ಅಯ್ಯ, ಜ್ಯೋತಿರಾಕೃತಿ, ಓಂಕಾರ ಪ್ರಣಮ, ಸಿಂಹನಾದ,
ಆಜ್ಞಾಚಕ್ರ, ಮಾಣಿಕ್ಯವರ್ಣ, ಐಕ್ಯಸ್ಥಲ, ಶುದ್ಧತನು,
ಸದ್ಭಾವಹಸ್ತ, ಮಹಾಲಿಂಗ ಹೃದಯವೆಂಬ ಮುಖ, ಸಮರಸಭಕ್ತಿ,
ತೃಪ್ತಿಪದಾರ್ಥ, ಸುತೃಪ್ತಿಪ್ರಸಾದ, ಮಹಾದೇವ ಪೂಜಾರಿ,
ಮಹಾದೇವನಧಿದೇವತೆ, ಮಹಾಸಾದಾಖ್ಯ,
ಅಖಂಡವೆಂಬ ಲಕ್ಷಣ, ಮಹವೆಂಬ ಸಂಜ್ಞೆ, ಪಾತಾಳದಿಕ್ಕು,
ಗಾಯತ್ರಿವೇದ, ಆತ್ಮನೆ ಅಂಗ ಜ್ಞಾನಾತ್ಮ,
ಚಿಚ್ಛಕ್ತಿ, ಶಾಂತ್ಯತೀತೋತ್ತರ ಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನ ಆಜ್ಞಾಚಕ್ರವೆಂಬ ತ್ರಿಕೂಟಸಂಗಮಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ, ಬೋಧಾಸ್ವರೂಪವಾದ
ಮಹಾಲಿಂಗವೆ ಸಂಗಮೇಶ್ವರಲಿಂಗವೆಂದು,
ಅವಸ್ಥಾತ್ರಯವ ಮಡಿಮಾಡಿ,
ಸಂತೋಷವೆಂಬ ಜಲದಿಂ ಮಜ್ಜನಕ್ಕೆರದು,
ಆತ್ಮನಿವೃತ್ತಿಯಾದ ಗಂಧವ ಧರಿಸಿ,
ಭಾವ ಸದ್ಭಾವವಾದಕ್ಷತೆಯನಿಟ್ಟು,
ಅಲ್ಲಿಹ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಮಾಣಿಕ್ಯ ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ನಿರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ನಿರ್ಮಲವೆಂಬಾಭರಣವ ತೊಡಿಸಿ,
ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ,
ಸಮರಸವೆಂಬ ತಾಂಬೂಲವನಿತ್ತು,
ಇಂತು ಮಹಾಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಮಹಾಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು,
ಆ ಮಹಾಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ಓಂ ಓಂ ಓಂ ಓಂ ಓಂ ಎಂಬ
ಓಂಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಮಹಾಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿತ್ಯತೃಪ್ತನಾಗಿ ಆಚರಿಸಬಲ್ಲಾತನೆ
ಸಮರಸಭಕ್ತಿಯನುಳ್ಳ ಲಿಂಗೈಕ್ಯ ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, jyōtirākr̥ti, ōṅkāra praṇama, sinhanāda,
ājñācakra, māṇikyavarṇa, aikyasthala, śud'dhatanu,
sadbhāvahasta, mahāliṅga hr̥dayavemba mukha, samarasabhakti,
tr̥ptipadārtha, sutr̥ptiprasāda, mahādēva pūjāri,
mahādēvanadhidēvate, mahāsādākhya,
akhaṇḍavemba lakṣaṇa, mahavemba san̄jñe, pātāḷadikku,
gāyatrivēda, ātmane aṅga jñānātma,
cicchakti, śāntyatītōttara kale
intu ippattunālku sakīlaṅgaḷanoḷakoṇḍu
enna ājñācakravemba trikūṭasaṅgamakṣētradalli
mūrtigoṇḍirda, bōdhāsvarūpavāda
mahāliṅgave saṅgamēśvaraliṅgavendu,
Avasthātrayava maḍimāḍi,
santōṣavemba jaladiṁ majjanakkeradu,
ātmanivr̥ttiyāda gandhava dharisi,
bhāva sadbhāvavādakṣateyaniṭṭu,
alliha dvidaḷaṅgaḷane puṣpadamāleyendu dharisi,
alliha kamalasadvāsaneya dhūpava bīsi,
alliha māṇikya varṇave karpūrada jyōtiyendu beḷagi,
alliha nirāvastheyemba navīna vastrava hoddisi,
nirmalavembābharaṇava toḍisi,
sutr̥ptiyemba naivēdyavanarpisi,
samarasavemba tāmbūlavanittu,
intu mahāliṅgakke aṣṭavidhārcaneyaṁ māḍi,
kōṭisūryana prabheyante beḷaguva mahāliṅgavannu
Kaṅgaḷu tumbi nōḍi, manadalli santōṣagoṇḍu,
ā mahāliṅgada pūjeya samāptava māḍi,
ōṁ ōṁ ōṁ ōṁ ōṁ ōṁ emba
ōṅkāra ṣaḍvidhamantraṅgaḷinde namaskarisi,
ā mahāliṅgave tānendaridu kūḍi eraḍaḷidu
nityatr̥ptanāgi ācarisaballātane
samarasabhaktiyanuḷḷa liṅgaikya nōḍa
saṅganabasavēśvara.