Index   ವಚನ - 93    Search  
 
ಅಯ್ಯ, ನಿರಂಜನಾಕೃತಿ, ವ್ಯಂಜನ ಹಕಾರಪ್ರಣಮ, ಮಹಾನಾದ, ಪಶ್ಚಿಮಚಕ್ರ, ಅಖಂಡಮಹಾಜ್ಯೋತಿವರ್ಣ, ನಿರಾತಂಕಸ್ಥಲ, ನಿರ್ಮುಕ್ತಿತನು, ನಿರ್ಮಾಯಹಸ್ತ, ನಿರಂಜನ ಲಿಂಗ, ಪಶ್ಚಿಮವೆಂಬ ಮುಖ, ಅಪ್ರಮಾಣ ಭಕ್ತಿ, ಅವಿರಳ ಪದಾರ್ಥ, ಅವಿರಳ ಪ್ರಸಾದ, ಪರಮೇಶ್ವರ ಪೂಜಾರಿ, ಪರಮೇಶ್ವರನಧಿದೇವತೆ, ನಿಶ್ಚಲಸಾದಾಖ್ಯ, ನಿರ್ವಂಚಕವೆಂಬ ಲಕ್ಷಣ, ಅವಿರಳವೆಂಬ ಸಂಜ್ಞೆ, ನಿರಾಳದಿಕ್ಕು, ಅಗಮ್ಯವೇದ, ಶಿವಯೋಗಿಯೆ ಅಂಗ, ಚಿನ್ಮಯಾತ್ಮ, ನಿರ್ವಯಶಕ್ತಿ, ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ಪಶ್ಚಿಮಚಕ್ರವೆಂಬ ಮಹಾ ಮೇರುಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿಜಮೋಕ್ಷ ಕರ್ತುಸ್ವರೂಪವಾದ ನಿರಂಜನಲಿಂಗವೆ ಶಾಂಭವಮೂರ್ತಿಲಿಂಗವೆಂದು ಹಂಸತ್ರಯವ ಮಡಿಮಾಡಿ, ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರದು, ನಿರ್ಜಾತವೆಂಬ ಗಂಧವ ಧರಿಸಿ, ನಿರ್ಜಡವೆಂಬಕ್ಷತೆಯನಿಟ್ಟು, ನಿರ್ದ್ವಂದ್ವವೆಂಬ ಪುಷ್ಪದ ಮಾಲೆಯಂ ಧರಿಸಿ, ನಿರ್ಲಜ್ಜವೆಂಬ ಧೂಪವ ಬೀಸಿ, ನಿರಾಲಂಬವೆಂಬ ಜ್ಯೋತಿಯ ಬೆಳಗಿ, ನಿರವಯವೆಂಬ ವಸ್ತ್ರವ ಹೊದ್ದಿಸಿ, ನಿಸ್ಪೃಹವೆಂಬಾಭರಣವ ತೊಡಿಸಿ, ನಿರಾಳವೆಂಬ ನೈವೇದ್ಯವನರ್ಪಿಸಿ, ನಿರಾವರಣವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಸಹಸ್ರಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ನಿರಂಜನಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ನಿರಂಜನಲಿಂಗದ ಪೂಜೆಯ ಸಮಾಪ್ತವ ಮಾಡಿ, ಮಹಾಜ್ಞಾನಜಪವೆಂಬ ದ್ವಾದಶಪ್ರಣಮಮಂತ್ರಂಗಳಿಂದೆ ನಮಸ್ಕರಿಸಿ, ಈ ನಿರಂಜನಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಜಾಂತರ್ಯಾಮಿಯಾಗಿ ಆಚರಿಸಬಲ್ಲಾತನೆ ಅಪ್ರಮಾಣಭಕ್ತಿಯನ್ನುಳ್ಳ ನಿಜಮೋಕ್ಷಸ್ವರೂಪ ನೋಡ ಸಂಗನಬಸವೇಶ್ವರ.