Index   ವಚನ - 94    Search  
 
ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು, ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು, ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು, ಆಧಾರಚಕ್ರ ಮೊದಲಾಗಿ ನವಚಕ್ರಗಳು, ಪೀತವರ್ಣ ಮೊದಲಾಗಿ ನವವರ್ಣಗಳು, ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು, ಸ್ಥೂಲತನು ಮೊದಲಾಗಿ ನವತನುಗಳು, ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು, ಆಚಾರಲಿಂಗ ಮೊದಲಾಗಿ ನವಲಿಂಗಗಳು, ಘ್ರಾಣಮುಖ ಮೊದಲಾಗಿ ನವಮುಖಗಳು, ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು, ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು, ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು, ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು, ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು, ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು, ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು, ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು, ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು, ಋಗ್ವೇದ ಮೊದಲಾಗಿ ನವವೇದಗಳು, ಚಿತ್ಪೃಥ್ವಿ ಮೊದಲಾಗಿ ನವ ಅಂಗಗಳು, ಜೀವಾತ್ಮ ಮೊದಲಾಗಿ ನವ ಆತ್ಮರು, ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು, ನಿವೃತ್ತಿಕಲೆ ಮೊದಲಾಗಿ ನವಕಲೆಗಳು, ಇಂತು ಇಪ್ಪತ್ತುನಾಲ್ಕು ಸಕೀಲಂಗಳು ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ ಸಮಸ್ತ ಕ್ಷೇತ್ರಂಗಳನೊಳಕೊಂಡು ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ, ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ, ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು, ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು, ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ, ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ, ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ, ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ, ನಿರಾವಯವೆಂಬ ತಾಂಬೂಲವನಿತ್ತು, ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ, ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ, ಉನ್ಮನಾಗ್ರದಲ್ಲಿ ಸಂತೋಷಂಗೊಂಡು ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ, ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ, ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ, ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ, ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗನಾಗಿ, ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೋತಿ ಸದ್ಭಕ್ತ ಜಂಗಮ ನೋಡ ಸಂಗನಬಸವೇಶ್ವರ.