ಅಯ್ಯ, ಇಂತು ಮಹಾಪ್ರಮಥಗಣಂಗಳ
ಚಿದ್ಘನಪ್ರಸಾದವಚನಾಮೃತದ ಅನುಭಾವಸೂತ್ರವ
ಮರ್ತ್ಯಲೋಕದ ಮಹಾಗಣಂಗಳು ಅರಿದಾನಂದಿಸುವ
ವಿಚಾರವೆಂತೆಂದಡೆ :
ಈ ವಚನಾರ್ಥವ ಶೈವ-ವೀರಶೈವ ಉಭಯಮಾರ್ಗದ
ಅಪಶೈವರಿಗೆ ತೋರಿ ಅನುಭಾವವ ಮಾಡಲಾಗದು.
ಪಂಚಮಹಾಪಾತಕ ಸೂತಕರಿಗೆ ಬೋಧಿಸಲಾಗದು.
ಋಣಪಾತಕ, ಆಚಾರಭ್ರಷ್ಟ, ಗುರುದೀಕ್ಷಾಹೀನ,
ಗುರುಲಿಂಗಜಂಗಮದ್ರೋಹಿಗಳಿಗೆ ಹೇಳಲಾಗದು.
ಸ್ತ್ರೀಹತ್ಯ, ಶಿಶುಹತ್ಯ, ಮಾತೃಪಿತೃದ್ರೋಹಿಗಳೊಡನೆ ಪ್ರಸಂಗಿಸಲಾಗದು.
ಇಷ್ಟಲಿಂಗಬಾಹ್ಯರು ಕೇಳುವಂತೆ ಓದಿ
ಅರ್ಥ-ಅನ್ವಯ-ಆಕಾಂಕ್ಷೆಗಳ ಮಾಡಿ
ಸ್ವರೂಪಾರ್ಥ-ಸಂಬಂಧಾರ್ಥ-ನಿಶ್ಚಯಾರ್ಥಂಗಳಿಂದ
ಶರಣಗಣಂಗಳ ನಡೆ-ನುಡಿಯ ಪ್ರಕಟಿಸಲಾಗದು.
ಇಂತು ಗುರುವಾಕ್ಯವ ಮೀರಿ
ಮಹಾನುಭಾವ ಮಂತ್ರಾರ್ಥವ ಬಹಿಷ್ಕರಿಸಿದವರು
ಜನ್ಮ-ಜರೆ-ಮರಣಕ್ಕೊಳಗಾಗಿ, ಭವಪಾಶದಲ್ಲಿ ಬಿದ್ದು
ಶುನಿ-ಸೂಕರಾದಿ ಜನಿತರಾಗಿ ಪ್ರಳಯಾದಿಗಳಿಗೆ ಒಳಗು ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, intu mahāpramathagaṇaṅgaḷa
cidghanaprasādavacanāmr̥tada anubhāvasūtrava
martyalōkada mahāgaṇaṅgaḷu aridānandisuva
vicāraventendaḍe:
Ī vacanārthava śaiva-vīraśaiva ubhayamārgada
apaśaivarige tōri anubhāvava māḍalāgadu.
Pan̄camahāpātaka sūtakarige bōdhisalāgadu.
R̥ṇapātaka, ācārabhraṣṭa, gurudīkṣāhīna,
guruliṅgajaṅgamadrōhigaḷige hēḷalāgadu.
Strīhatya, śiśuhatya, mātr̥pitr̥drōhigaḷoḍane prasaṅgisalāgadu.
Iṣṭaliṅgabāhyaru kēḷuvante ōdi
artha-anvaya-ākāṅkṣegaḷa māḍi
svarūpārtha-sambandhārtha-niścayārthaṅgaḷinda
śaraṇagaṇaṅgaḷa naḍe-nuḍiya prakaṭisalāgadu.
Intu guruvākyava mīri
mahānubhāva mantrārthava bahiṣkarisidavaru
janma-jare-maraṇakkoḷagāgi, bhavapāśadalli biddu
śuni-sūkarādi janitarāgi praḷayādigaḷige oḷagu nōḍa
saṅganabasavēśvara.