Index   ವಚನ - 101    Search  
 
ಅಯ್ಯ, ಇಂತು ನಿರಂಜನ ಮಹಾಲಿಂಗಾನುಭಾವಸೂತ್ರವ ಎರಡೆಂಬತ್ತೆಂಟುಕೋಟಿ ಹರಗುರು ವಾಕ್ಯಪ್ರಮಾಣವಚನಾನುಭಾವವ ಪ್ರಕಟಿಸಿ ಈ ಒಂದು ವಚನಾರ್ಥದಲ್ಲಿ ಅತಿಗೋಪ್ಯದಿಂದ ಅನಾದಿ ನಿಃಕಳಂಕ ನಿಶ್ಶೂನ್ಯ ನಿರಂಜನ ನಿರಾವಯ ಶರಣಸೂತ್ರವಿಡಿದು ನಿರಾಯಾಸಂ ಆಯಾಸಂಗಳೇನು ತೋರದೆ ಈ ವಚನಾರ್ಥದ ಆದಿ-ಅಂತ್ಯವನರುಹಿಸಿಕೊಟ್ಟೆವು ನೋಡ. ಆ ವಿಚಾರವೆಂತೆಂದಡೆ : ಶ್ರೀ ಮದ್ಗುರು ಕಾರುಣ್ಯವೇದ್ಯನು, ವಿಭೂತಿ-ರುದ್ರಾಕ್ಷಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗಸಂಬಂಧಿ, ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕ-ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು, ಏಕಲಿಂಗ ನಿಷ್ಠಾಪರನು, ಚರಲಿಂಗ ಲೋಲುಪ್ತನು, ಶರಣ ಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ, ಅನ್ಯದೈವದ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸ್ತ್ರೀಯರ ಬೆರಸ, ಪರಧನವನೊಲ್ಲ, ಪರನಿಂದ್ಯವನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತರ ಸಂಗವಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದವೆಲ್ಲವ ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದ್ಯವ ಸೈರಿಸ, ಪ್ರಸಾದನಿಂದ್ಯವ ಕೇಳ, ಅನ್ಯರನಾಸೆಗೈಯ್ಯ, ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರೈಸ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪ-ವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್‍ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಂ ಸಂಪನ್ನ ಇಂತೀ ಭಾವನ್ನದಿರವ ಅಂತರಂಗದಲ್ಲಿ ಒಳಕೊಂಡು ಬಹಿರಂಗದಲ್ಲಿ ನಡೆದಂತೆ ನುಡಿದು, ನುಡಿದಂತೆ ನಡದು, ಸದ್ಭಕ್ತಿ-ಜ್ಞಾನ-ವೈರಾಗ್ಯ ಸಂಪನ್ನತ್ವದಿಂದ ಸಕಲಪ್ರಮಥಗಣಂಗಳಿಂದ ಕೀರ್ತಿಸಿಕೊಳ್ಳುತ್ತ, ಆ ಆದಿಪ್ರಮಥರ ಕೀರ್ತನೆ ವಿಚಾರವೆಂತೆಂದಡೆ : ಶ್ರೀಮದನೇಕಲೋಕ-ವಿಸ್ತಾರಕ ಕಾರಣರೂಪ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿಸ್ವರೂಪ, ಪರತರ ಪರಬ್ರಹ್ಮಾನುಭಾವ ಸಾರ್ವಭೌಮ, ಷಟ್ಸ್ಥಲಸ್ಥಾಪನಾಚಾರ್ಯ, ಪಂಚಾಚಾರ ಪ್ರಮಥನಾಯಕ ಸರ್ವಾಚಾರ ನಿಷ್ಠಾಗರಿಷ್ಠ, ಲಿಂಗಲೋಲುಪ್ತ, ಲಿಂಗಭೋಗೋಪಭೋಗಿ, ಜಂಗಮಾನುಭಾವ, ಸದ್ಭಕ್ತ ಹೃನ್ಮಂದಿರವಾಸ, ನಿತ್ಯ ಕಲ್ಯಾಣೋತ್ಸಹಪೂರ್ಣಾವತರ್ಯ, ಲಿಂಗಲೀಲಾನಂದ, ಏಕವಿಂಶತಿಯುಗಸ್ಥಾಪನಾಚಾರ್ಯವರ್ಯ, ಮಂಜುಳಾಂತರಂಗ, ಮನುಮುನಿವಂದ್ಯ, ಪ್ರದಾಯಕ ತ್ರೈದಶಪರ್ವತಾಧೀಶ್ವರ, ಮದನಮರ್ದನ, ಮಾಯಾಕೋಲಾಹಲ, ಅಷ್ಟಾವರಣ ಸ್ವರೂಪ, ತ್ರಿವಿಧಾನುಗ್ರಹ ಪ್ರತಿಪಾದಕ, ತ್ರಿವಿಧ ಪಾದೋದಕ ಪ್ರಸಾದಲೋಲುಪ್ತ, ತ್ರಿವಿಧಾಚಾರಸನ್ಮೋಹಿ, ತ್ರಿಗುಣಾನಂದಭರಿತ, ತ್ರಿಮಲದೂರ, ನಿರ್ಮಲ-ನಿಃಕಳಂಕ-ನಿಃಶೂನ್ಯ-ನಿರಂಜನ, ಅನುಮಿಷಾರಾಧ್ಯ, ತ್ರಿವಿಧ ಲಿಂಗಾನುಭಾವ ಅಖಿಳಾಂಡ ಪ್ರತಿಷ್ಠಾಪ್ರದಾಯಕ, ಸದ್ಧರ್ಮಸ್ವರೂಪ, ಸತ್ಕ್ರಿಯಾ ಸಮ್ಯಜ್ಞಾನ ಸದಾಭರಿತ, ನಿತ್ಯ ತೃಪ್ತಾನಂದಮಂತ್ರಸ್ವರೂಪ, ಅನಂತಸೂರ್ಯಚಂದ್ರಾಗ್ನಿಪ್ರಕಾಶ, ಅಜ್ಞಾನ ತಿಮಿರಾಂಧಸ್ಯ, ಕಾರಣಾವತಾರ ಸರ್ವಜ್ಞ,ಪ್ರದಾಯಕ, ಕಾಮಧೇನು-ಕಲ್ಪವೃಕ್ಷ, ಚಿಂತಾಮಣಿಗೆ ಮಾತೃಸ್ವರೂಪ, ವಾಚಾತೀತ-ವರ್ಣಾತೀತ-ಭಾವಾತೀತ-ಜ್ಞಾನಾತೀತ, ಚಿತ್ಕಲಾಸ್ವರೂಪ, ಅಯೋನಿಸಂಭವ, ಅಜಡಸ್ವರೂಪ, ಬತ್ತೀಶಕಳಾಮೂರ್ತಿ, ಜರೆಮರಣ ಸಂಸ್ಕೃತಿದೂರ, ವರವೀರಶೈವಮತ ಸ್ಥಾಪನಾಚಾರ್ಯ, ನಿಜ ಶಿವಯೋಗಭರಿತಾನಂದಮೂರ್ತಿ, ಗುರುಮಾರ್ಗಾಚಾರ ಪ್ರತಿಷ್ಠಾಪ್ರದಾಯಕ, ಅನಾಚಾರ ಸಂಹಾರ, ಮಹಿಮಾಸ್ವರೂಪ, ಸದ್ಭಕ್ತಜಿಹ್ವಾಗ್ರ ಹೃನ್ಮಂದಿರಾವಾಸ. ಏಕವಿಂಶತಿ ದೀಕ್ಷಾಬೋಧಸ್ವರೂಪ, ಷಡ್ಗುಣೈಶ್ವರ್ಯ ಸಂಪತ್ಕರವನುಳ್ಳ ಮುಕ್ತಿಪ್ರದಾಯಕ, ಮೂಲಮಂತ್ರಮೂರ್ತಿ ಲೋಕಪಾವನಾರ್ಥ ಕೂಡಲಸಂಗಮೇಶ್ವರನ ಚಿದ್ಗರ್ಭೋದಯ ಬಸವದಂಡನಾಥ ಪ್ರಮಥಗಣಂಗಳ ಭಕ್ತಿಹಿತಾರ್ಥವಾಗಿ, ಅವತರಿಸಿದಂಥ ವಿರಾಣ್ಮೂರ್ತಿ! ಅನಾದಿಗಣೇಶ್ವರ, ಅನಾದಿಗಣೇಶ್ವರನ ಶಿಷ್ಯರು ಆದಿಗಣೇಶ್ವರ, ಆದಿಗಣೇಶ್ವರನ ಶಿಷ್ಯರು ನಿರ್ಮಾಯನೆಂಬ ಗಣೇಶ್ವರ, ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ, ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರ, ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮ ಗಣೇಶ್ವರ, ಆತ್ಮಗಣೇಶ್ವರನ ಶಿಷ್ಯರು ಅಧ್ಯಾತ್ಮ ಗಣೇಶ್ವರ, ಅಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ, ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು, ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು, ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು, ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿ ಗೋಸಲದೇವರು, ಹರದನಹಳ್ಳಿ ಗೋಸಲದೇವರ ಶಿಷ್ಯರು ಶಂಕರದೇವರು, ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು, ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು, ಚೆನ್ನಬಸವೇಶ್ವರದೇವರ ಶಿಷ್ಯರು ತೋಂಟದ ಸಿದ್ಧೇಶ್ವರಸ್ವಾಮಿಗಳು, ತೋಂಟದ ಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಮರುಳಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರಸ್ವಾಮಿಗಳ ಶಿಷ್ಯರು ರೇವಣಸಿದ್ಧೇಶ್ವರಸ್ವಾಮಿಗಳು, ರೇವಣಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಶಿವಲಿಂಗೇಶ್ವರಸ್ವಾಮಿಗಳು, ಶಿವಲಿಂಗೇಶ್ವರಸ್ವಾಮಿಗಳ ಶಿಷ್ಯರು ನಿರಂಜನೇಶ್ವರಸ್ವಾಮಿಗಳು, ನಿರಂಜನೇಶ್ವರಸ್ವಾಮಿಗಳ ಶಿಷ್ಯರು ಮರಿಬಸವಲಿಂಗೇಶ್ವರಸ್ವಾಮಿಗಳು, ಮರಿಬಸವಲಿಂಗೇಶ್ವರಸ್ವಾಮಿಗಳ ಶಿಷ್ಯರು ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳು, ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯರು ಚೆನ್ನಮಲ್ಲೇಶ್ವರಸ್ವಾಮಿಗಳು ಚೆನ್ನಮಲ್ಲೇಶ್ವರಸ್ವಾಮಿಗಳ ಶಿಷ್ಯರು ಚೆನ್ನಂಜೇಶ್ವರಸ್ವಾಮಿಗಳು, ಚೆನ್ನಂಜೇಶ್ವರಸ್ವಾಮಿಗಳ ಶಿಷ್ಯರು ಗುರುಶಾಂತೇಶ್ವರಸ್ವಾಮಿಗಳು, ಗುರುಶಾಂತೇಶ್ವರಸ್ವಾಮಿಗಳ ಶಿಷ್ಯರು ಶಾಂತಮಲ್ಲಸ್ವಾಮಿಗಳು ಶಾಂತಮಲ್ಲಸ್ವಾಮಿಗಳ ಕರ-ಮನ-ಭಾವದಲ್ಲುದಯವಾದ ಗುರುಸಿದ್ಧಲಿಂಗ ನಾನಯ್ಯ. ಆ ಗುರುಸಿದ್ಧಲಿಂಗನ ಕರ-ಮನ-ಸುಭಾವದಲ್ಲಿ ಶರಣಗಣಂಗಳ ಶುದ್ಧಸಿದ್ಧಪ್ರಸಿದ್ಧ ಪ್ರಸಾದವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರ-ಮಂತ್ರ-ಧ್ಯಾನ- ಜಪ-ಸ್ತೋತ್ರ-ಮನೋರ್ಲಯ-ನಿರಂಜನ ಪೂಜೆಯ ಕೈಕೊಂಡು ಪ್ರಮಥಗಣಂಗಳ ಸ್ವಾನುಭಾವಸೂತ್ರವನೊಳಕೊಂಡು ಒಳಗು ಬೆಳಗನೆ ನುಂಗಿ ಬೆಳಗು ಒಳಗನೆ ನುಂಗಿ, ಛಳಿ ಮೋಹಕದ ಮಂಜು ನುಂಗಿದಂತೆ ಹಲವು ದೀಪವ ಬಯಲ ಗಾಳಿ ನುಂಗಿದ ತೆರದಿ ಕಳೆಯಳಿದ ಕೂಡಲಚೆನ್ನಸಂಗಯ್ಯನು. ಇಂತು ಚಿಕ್ಕದಂಡನಾಥ ಚೆನ್ನಬಸವೇಶ್ವರಸ್ವಾಮಿಗಳ ಪ್ರಸನ್ನಪ್ರಸಾದಕ್ಕೆ ಒಪ್ಪಿಗೆಯಾಗಿ ಈ ವಚನಾನುಭಾವಶಾಸ್ತ್ರವ ಕೈಕೊಂಡು ಸದ್ಭಕ್ತಶರಣಗಣಂಗಳಿಗೆ ಬೋಧಿಸಿ ಸಂಪೂರ್ಣವಮಾಡುವುದಕ್ಕೆ ಕರ್ತುಗಳಾಗಿ ಒಪ್ಪುತಿರ್ಪಿರಿ ನೋಡ ಸಂಗನಬಸವೇಶ್ವರ.