ವಚನ - 904     
 
ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸ್ವಾಯತಲಿಂಗವಿಡಿದು ಸನ್ನಿಹಿತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸನ್ನಿಹಿತಲಿಂಗವಿಡಿದು ಮಹಾಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಮಹಾಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಪ್ರಸಾದಲಿಂಗವಿಡಿದು ಜಂಗಮಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಜಂಗಮಲಿಂಗವಿಡಿದು ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಶಿವಲಿಂಗವಿಡಿದು ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯಾ- ಗುರುಲಿಂಗವಿಡಿದು ಆಚಾರಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಇಂತೀ ಆಚಾರಲಿಂಗವಿಡಿದು ಷಟ್‍ಸ್ಥಲದ ಆದಿ ಮಧ್ಯಾಂತವರಿದು, ಸಂಬಂಧಿಸಿ, ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದನುವ, ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ. ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.