Index   ವಚನ - 35    Search  
 
ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರೊ. ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು ಆ ನಾಲ್ಕು ಪವನ ಒಂದುಗೂಡಿ ಪೃಥ್ವಿಯ ಗುಣವನರಿಯಬಲ್ಲರೆ ಭಕ್ತಯೆಂದೆನಿಸಬಹುದು. ಎಂಟೆಸಳ ಕಮಲದಲ್ಲಿ ಮೆಟ್ಟಿ ಆಡುವ ಹಂಸನ ಸ್ಥಳವನರಿಯದೆ ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ ಜ್ಞಾನಿಯೆಂದೆನಿಸಬಹುದು. ಮಾರ್ಗ ಇಲ್ಲದೆ ಹಾದಿಯ ನಡದು ಇಪ್ಪತ್ತೊಂದುಮಣಿಯ ಯಜ್ಜವಮಾಡಿ ಪೋಣಿಸಿ ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ ತ್ರಿವಿಧಮಣಿಯ ಮೇರುವೆಯಂ ಕಟ್ಟಿ ಜಪವ ಮಾಡಬಲ್ಲರೆ, ಜಪವು ಬಲಿದು ಸ್ಥೂಲಕರ್ಮವೆಂಬ ಜಾಡ್ಯವನಳಿದುದು ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ ಕುಲಮದ, ಧನಮದ, ವಿದ್ಯಾಮದ, ಪ್ರಾಯಮದವೆಂಬ ಮದಂಗಳೊಳು ಮುಳುಗಿ ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.