Index   ವಚನ - 37    Search  
 
ಗುಹೇಶ್ವರ ಎಂಬ ಅಕ್ಷರದ ಭೇದವು: ವರ ಕಂಬವೆ ಕಾಲು, ತೊಡಿಯೇ ಬೋದಿಗೆ, ಸಾರಣ ಚರ್ಮ, ಕರಯೆರಡು ಮದನಧ್ವಜಯೆರಡು, ಸ್ತುತಿಬಾಯಿ ಬಾಗಿಲು, ಎರಡು ಶ್ರೋತ್ರವೇ ಬೆಳಕಂಡಿಯು, ಮೂಗೇ ಜಾಳಿಂದ್ರ, ಆಲಿಗಳೆ ಸೋಪಾನ, ಶಿರವೇ ಕಲಶ, ಭಸಿತವೆ ಪತಾಕೆ | ಇಂತೀ ಪಂಚಗುಹೇಶ್ವರನೆಂಬ ದೇಗುಲ. ಇನ್ನು ಅದಕ್ಕೆ ಸ್ವರವಾವುದೆಂದಡೆ: ಗುಹೇಶ್ವರನೆ ಸ್ವರ, ಆ ದೇಗುಲಕ್ಕೆ ಲಿಂಗವೇ ಪೀಠ. ಪಂಚವಿಷಯವೆಂಬ ಪೂಜೆ, ಜ್ಞಾನವೆಂಬುದ ಹಿಡಿದು ಅಜ್ಞಾನವ ದೂಡಿ, ತಾನೆ ತನ್ನೊಳು ತಿಳಿದುದೆ ಭಂಡಾರ. ಅದಕ್ಕೆ ಮನವೆ ಕಿವಿ, ನಿರ್ಮನವೆಂಬ ಕದವ ತೆರೆದು ಸುಖವೆಂಬುದೆ ನೈವೇದ್ಯ, ಜಿಹ್ವೆಯೇ ಪೂಜಾರಿ, ನಿತ್ಯವೇ ಪ್ರಸಾದ, ಮನದಿಚ್ಛೆಗೆ ಪೊಸಪಂಚಾಕ್ಷರಿಯ ಗಸಣೆ, ಷಡಾಕ್ಷರವೆ ಶ್ರೀಗಂಧ, ಜ್ವಾಲೆಯೇ ಧೂಪ, ಸ್ಥಳವೇ ಹರಿವಾಣ, ಬೋನವು ತಾನೆ, ಪೂಜಿಸುವಾತನು ತಾನೆ, ಪೂಜೆಗೊಂಬಾತನು ತಾನೆ. ಇಂತೀ ಪರಮಾನಂದವೆಂಬ ಸಂಗಗಳ ಕೂಡಲಂದೆ ಚಿತ್ಸೂರ್ಯರ ಕೋಟಿಪ್ರಕಾಶವಾಗಿ ತೋರುತ್ತಿಹ ಗೊಹೇಶ್ವರಪ್ರಿಯ ನಿರಾಳಲಿಂಗ.