Index   ವಚನ - 7    Search  
 
ಸಂಗಕ್ಕೆ ಶರಣರ ಸಂಗವೇ ಲೇಸಯ್ಯ, ಜಂಗಮದರಿವು ಲಿಂಗದ ನಿಲವ ತೋರುವುದಾಗಿ, ಲಿಂಗದ ನಿಲವಾವುದೆಂದಡೆ: ನೂರ ನಿಲಿಸಿ, ಆರ ಮೀರಿ, ಹದಿನೆಂಟ ಕಳೆದು, ಏಳನುಳಿದು, ಒಂಬತ್ತು ಮೀರಿ, ನಿಜಜಂಗಮದ ನಿಜಲಿಂಗದ ನಿಜಶರಣರ ಅರಿವು. ಈ ತ್ರಿವಿಧದ ನಿರುಗೆ ಎಂತೆಂದಡೆ: ತತ್ತ್ವಜ್ಞಾನದ ನುಡಿಯಲ್ಲಿ ಹೊಗದು. ಅದೆಂತೆಂದಡೆ: ನಿಮ್ಮ ಭಿಕ್ಷದ ಭಿತ್ತಿಯ ಹೇಳುವೆ. ಭಿಕ್ಷೆ ಮೂರು ವಿಧವಾಗಿಪ್ಪುದು. ಭಿಕ್ಷೆ ಏಳುವಿಧವಾಗಿಪ್ಪುದು. ಭಿಕ್ಷೆ ಹನ್ನರಡುವಿಧವಾಗಿಪ್ಪುದು. ಭಿಕ್ಷದ ನಿರುಗೆಯ ಬಲ್ಲ ನಿಜವೀರದೇವಯ್ಯ. ಆತನ ಅರಿವನುಂಟುಮಾಡಿಕೊಂಡು ಆಚರಿಸುವ ಚರಜಂಗಮದ ಅರಿವಿನ ತೃಪ್ತಿಯಾವುದೆಂದಡೆ: ಕ್ಷಾರವ ಕಂಡು ವಿಭ್ರಮಣನಂತಿರಬೇಕು ಇದು ಕ್ರೀಗಾಗದೆಂದು ಕಂಗೆಡಲೇಕೆ? ಚತುರ್ದಿವಸದಲ್ಲಿಯೂ ಶರಣನೊಬ್ಬನೇ ಚರಿಸುವ ಕೇಟೇಶ್ವರನ ಕರುಣದಲ್ಲಿ. ಆ ಚತುರ್ದಿವಸದಲ್ಲಿಯೂ ಆಚರಿಸುವ ಶರಣನ ನಿಲವ ಕಂಡು ಮತ್ತೆ ಗೋಣಿಯ ಮರೆಯಿಲ್ಲ; ಇವ ಕುರಿತು ಅನುಸರಿಸದೆ ಆಚರಿಸುತಿಪ್ಪನು.