Index   ವಚನ - 8    Search  
 
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ ಭೇದಮಂ ಪೇಳ್ವೆ, ಅದೆಂತೆಂದಡೆ: ಒಂದು ಎರಡಾದ ಭೇದಮಂ ತಿಳುಹುವೆ. ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು ಎರಡು ನಾಮ ಅಂಗ ಪ್ರಾಣದ ಹಾಂಗೆ. ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು. ಈ ಎರಡು ವಸ್ತುವನೊಳಕೊಂಡು ಆಚರಿಸುವ ಜ್ಞಾನಿಜಂಗಮದ ನಿಲವೆಂತೆಂದೊಡೆ: ಆವನಾನೊಬ್ಬನು ಭಸಿತಮಂ ಪಿಡಿದು 'ಅಯ್ಯಾ ಶರಣಾರ್ಥಿ' ಎಂದು ಕರೆಯಲು, ಒಯ್ಯನೆ ನಿರಿಕಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ. ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ. ಸಾಕ್ಷಿ "ವರ್ಣಿ ವಕಾಪೋಸೋವಾಸಿ ಶೂದ್ರೋSಪಿ ಯದಿ ಭೂತಿದಃ| ಸಾ ಭೂತಿಃ ಸರ್ವಥಾ ಗ್ರಾಹ್ಹಯಾ ನೋಚೇದ್ಧ್ರೋಹಿಮಮೈವನಃ ||" ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು. ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ. ಲಿಂಗದೇವನು ಮನವ ನೋಡಬೇಕೆಂದು ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು ಇದರ ವಿಶ್ವಾಸವನರಿದು ವಿಚಾರಿಸಬೇಕು. ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ? ಚಿದಗ್ನಿಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು, ಆವನಾದರಾಗಲಿ ಹೋಗಲಮ್ಮೆನು, ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು. ಭವಿಯಾದರೆ ಬಿನ್ನಹವ ಕೈಕೊಂಬುದು. ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ, ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು. ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು. ಭಕ್ತನಾದರೆ ಬಿನ್ನಹವ ಕೈಕೊಂಡು ಆತನ ತ್ರಿವಿಧಕ್ಕೆ ತಾ ಕರ್ತನಾಗಿ ಆತನ ತನ್ನೊಳಗೆ ಇಂಬಿಟ್ಟುಕೊಂಬುದು ಜ್ಞಾನಜಂಗಮದ ಲಕ್ಷಣ. ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ: ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು ಉದಾಹರಣೆಯಿಂದ ಬಿನ್ನವಿಸುತ್ತಿರಲ ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು. ಇದಲ್ಲದೆ ಬಾಯಿಗೆ ಬಂದಂತೆ ನುಡಿದು ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ. ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು. ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು ಒಂದು ಪದಾರ್ಥವ ಕೈಕೊಂಬುದು. ಭಾವಜಂಗಮ ಇಂತೆರಡು ಮೀರಿ ತ್ರಿವಿಧರಹಿತವಾಗಿ ತೋರ್ಪುದು. ಗೋಣಿಯ ಮರೆಯ ಕೇಟೇಶ್ವರಲಿಂಗವು ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.