Index   ವಚನ - 10    Search  
 
ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ, ರೋಮರೋಮವೆಲ್ಲ ಲಿಂಗ. ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ. ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ. ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ, ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ. ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು. ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು. ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು. ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು. ಆಣವಮಲ, ಮಾಯಾಮಲ, ಕಾರ್ಮಿಕಮಲ ಅನಂತಕೋಟಿಗಳಿಗೆ ನಕಾರವೇ ಮೂಲ. ಇನ್ನೂರು ಹದಿನಾರು ಭುವನಂಗಳು ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು ಹದಿನೆಂಟುಧಾನ್ಯಕ್ಕೆ ಶಾಕಪತ್ರ ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ. ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ. ಈ ಜಗವೆಲ್ಲ ಮಲವನೆ ಭುಂಜಿಸಿ ಮಲವನೆ ವಿಸರ್ಜನೆಯಂ ಮಾಡುವರು. ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ. ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು. ಪ್ರಸಾದವೆಂತೆಂದಡೆ: ಅವರ್ಣ, ಆದಿ, ಅವ್ಯಕ್ತ. ಆ ನಾಮವು, ಭರ್ಗೋದೇವಾದಿ ಪಂಚಮೂರ್ತಿಗಳಿಗೆ ಆಶ್ರಯವಾಯಿತು. ಕರಣಚತುಷ್ಟಯಂಗಳಿಗೆ ನಿಲುಕದು. ಪ್ರಾಣಾದಿ ವಾಯುಗಳಿಗೆ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ. ವಾಕ್ಕಾದಿ ಕರ್ಮೇಂದ್ರಿಯಗಳಿಗೆ ತೋರದು. ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ, ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ.