Index   ವಚನ - 11    Search  
 
ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು, ಈ ಪ್ರಸಾದದ ಭೇದವ ತಿಳಿದವರಾರು. ಪ್ರಸಾದವೆಂಬ ಮೂರಕ್ಷರದ ಭೇದವ ಬಲ್ಲವರಾರು. ಆಕಾರ ನಿರಾಕಾರ ಸಾಕಾರ ಈ ಮೂರು ಪ್ರಕಾರವಾಯಿತ್ತು. ಈ 'ಪ್ರ'ಕಾರದ ಭೇದವ ಬಲ್ಲವರಾರು. ಸಕಲ ನಿಃಕಲ ನಿರಂಜನನಾದ ಭೇದವ ಬಲ್ಲರೆ 'ಸಾ'ಕಾರದ ಭೇದವ ಬಲ್ಲವರೆ, 'ದ'ಕಾರದ ಭೇದವನರಿದವರೆ, ಆದಿ ಆಧಾರ ಅನಾದಿ ಈ ತ್ರಿವಿಧವ ಬಲ್ಲವರು. ಇಂತೀ ಪ್ರಸಾದವೆಂಬ ಸದ್ಭಾವದ ನಿರ್ಣಯವನರಿಯದೆ ಪ್ರಸಾದವ ಕೊಟ್ಟಾತನು ಕೊಂಡಾತನು ಇವರಿಬ್ಬರ ಭೇದವೆಂತೆಂದರೆ: ಹುಟ್ಟುಗುರಡನ ಕೈಯ ತೊಟ್ಟಿಗುರುಡ ಹಿಡದಂತಾಯಿತು. ಈ ಭೇದವೆಂತೆಂದರೆ : ಇಷ್ಟ ಪ್ರಾಣ ಭಾವ 'ಪ್ರ'ಕಾರವಾಯಿತು. 'ಸಾ'ಕಾರವೆ ಜಂಗಮಲಿಂಗ ಪ್ರಸಾದಲಿಂಗ ಸೋಂಕಿ ನವಪೀಠಗಳಾಗಿ ನವಲಿಂಗ ಸೋಂಕಿ ನವಪೀಠ ಪ್ರಸಾದವಾಯಿತು. ನವಪ್ರಸಾದ ನವಪ್ರಣಮವೆ ನವಬೀಜವಾಯಿತು. ನವಹಸ್ತಗಳ ನೆಲೆಗೊಳಿಸಿ ಶಿವಲಿಂಗಧಾರಣಮಂ ಮಾಡಿ ನವಲಿಂಗಮುಖವನರಿದು ನವನೈವೇದ್ಯವಂ ಮಾಡಿ ನವಮುಖಕ್ಕಿತ್ತ ನವಪ್ರಸಾದಿಯಾದ ಶರಣನು ನವಚಕ್ರಗಳೆಲ್ಲ ನವಜಪ ಪ್ರಸಾದವೆ ತಾನೆ ಆಗಿ ನವರತ್ನಪ್ರಭೆ ಏಕರವಿರಶ್ಮಿಯಾದಂತೆ, ನವಕೋಟಿ ಸೋಮಸೂರ್ಯರ ಪ್ರಭೆ ಒಂದಾಗಿ ದಿವ್ಯಜ್ಯೋತಿರ್ಲಿಂಗ ತಾನಾದ ಶರಣನು. ಅರಿವೆ ಶಿವಲಿಂಗ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ತಾನೆ ಆಯಿತು. ನವ ಅಸ್ಥಿಗಳಡಗಿ ನವಲಿಂಗ ಒಂದೆ ಅಂಗವಾಗಿ ಬೆಳಗುತಿಹ ಶರಣಂಗೆ ಇಹಲೋಕವೇನು, ಪರಾತ್ಪರಲೋಕವೇನು? ಸಗುಣವೇನು ನಿರ್ಗುಣವೇನು? ನಿರಂಜನವೇನು, ನಿಷ್ಕಳವೇನು, ನಿರ್ಮಾಯವೇನು? ಆತಂಗೆ ಭಕ್ಷವಿಲ್ಲ ಅಭ್ಯಕ್ಷವಿಲ್ಲ ಅರ್ಪಿತವಿಲ್ಲ ಅನರ್ಪಿತವಿಲ್ಲ. ಆತ ರುಚಿಸಿದ್ದೆಲ್ಲ ಪ್ರಸಾದ, ಅತ ಸೋಂಕಿದ್ದೇ ಪಾವನ. ಆತ ಮೆಟ್ಟಿದ ಭೂಮಿಯೆಲ್ಲ ಪುಣ್ಯಕ್ಷೇತ್ರಂಗಳಾದವು. ಆತ ಜಲಮಲವ ಬಿಟ್ಟು ಬಂದ, ಆಚಮನವ ಮಾಡಿದ ಸ್ಥಾನಾದಿಗಳೆಲ್ಲ ಪುಣ್ಯತೀರ್ಥಂಗಳಾದವು. ಇಂತೀ ನಿಮ್ಮ ಶರಣನ ಸರ್ವಾಂಗವೆಲ್ಲ ಶಿವಮಂದಿರವು ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.