ಮಲದೇಹಿಗಳ ಅಂಗದ ಮೇಲೆ
ಲಿಂಗವಿದ್ದರೇನು ಅದು ಲಿಂಗವಲ್ಲ.
ಅದೇನು ಕಾರಣವೆಂದರೆ, ಅವನು ಪ್ರಸಾದದೇಹಿ
ಸಂಸ್ಕಾರಿದೇಹಿಯಲ್ಲ.
ಅವನ ಸೋಂಕಿದ ಲಿಂಗವು ಕೆರೆಯ ಕಟ್ಟೆಯ ಶಿಲೆಯಂತಾಯಿತು.
ಅವನು ಲಿಂಗಾಂಗಿ ಲಿಂಗಪ್ರಾಣಿಯಾಗದೆ
ಅವನು ಮುಟ್ಟಿದ ಭಾಂಡ ಭಾಜನಂಗಳೆಲ್ಲ ಹೊರಮನೆ
ಊರ ಅಗ್ಗವಣಿ ಎಂದೆನಿಸುವವು.
ಅವನು ಮಲದೇಹಿ.
ಅವನಂಗದಲ್ಲಿ ಗುರುವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲ ಪ್ರಸಾದವಿಲ್ಲ.
ಅವನು ಅಶುದ್ಧ ಮಲದೇಹಿ.
ಅವನ ಪೂಜಿಸಿದವಂಗೆ ರೌರವ ನರಕ ತಪ್ಪದೆಂದಾತ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.