Index   ವಚನ - 38    Search  
 
ಪಾದೋದಕವ ಕೊಂಡೆವೆಂಬ ಅಣ್ಣಗಳಿರಾ, ನೀವು ಕೇಳಿರೊ. ಪಾದೋದಕದ ನಿಲವ ನೀವು ಬಲ್ಲರೆ ಹೇಳಿರೊ. ಅರಿಯದಿರ್ದರೆ ಕೇಳಿರೊ. ಅದೆಂತೆಂದಡೆ: 'ಪಾ'ಕಾರವೆ ಪರಾತ್ಪರ ನಾಮವುಳ್ಳುದು, ಪರಬ್ರಹ್ಮವು ಪರಮಾನಂದ ಸ್ವರೂಪವು. 'ದೋ'ಕಾರವೆ ದಯದೋರಿತ್ತುವೆಂಬ ನಾಮವನ್ನುಳ್ಳ ದುರಿತ ವಿನಾಶನವು. 'ದ'ಕಾರವೆ ದಶದಿಶಭರಿತ ಪೂರ್ಣಚಿದಾಂಬುಧಿಯ ಪರಮಜ್ಞಾನವ ತೋರಿತ್ತು. 'ಕ'ಕಾರವೆ ಕರ್ಮವಿನಾಶನವೆನಿಸಿತ್ತು. ಇಂತಪ್ಪ ಪಾದೋದಕವ ನೀಡಿದಾತನೆ ಗುರುಲಿಂಗಜಂಗಮವೆನಿಸಬಹುದು; ಕೊಂಡಾತ[ನೆ] ಸದ್ಭಕ್ತನೆನಬಹುದು. ಇಂತೀ ಭೇದಾಭೇದವನರಿದು ಕೊಟ್ಟು ಕೊಂಡುದುದಕ್ಕೆ ಕಾಯಶುದ್ಧ, ಕರಣಶುದ್ಧ, ಜೀವಶುದ್ಧ, ಭಾವಶುದ್ಧ. ಈ ಚತುರ್ವಿಧ ಶುದ್ಧವಾಯಿತ್ತೆಂದಡೆ, ಕಾಯ ಸುದ್ಧಪ್ರಸಾದವಾಯಿತ್ತು, ಕರಣ ಸಿದ್ಧಪ್ರಸಾದವಾಯಿತ್ತು. ಜೀವ ಪ್ರಸಿದ್ಧಪ್ರಸಾದವಾಯಿತ್ತು, ಭಾವ ಪರಾತ್ಪರಪ್ರಸಾದವಾಯಿತ್ತು. ಈ ಚತುರ್ವಿಧ ಶುದ್ಧವ ಮಾಡಿದಾತ ನಿಮ್ಮ ಶರಣ. ಹೀಗಲ್ಲದೆ ಜಲವ ತೊಳೆದು ಕುಡಿವ ಮಲದೇಹಿಗಳ ಮುಖವ ನೋಡಲಾಗದಯ್ಯಾ. ಇದಕ್ಕೆ ಸಾಕ್ಷಿ: 'ಪಾಕಾರಂ ಪರಮಾನಂದಂ ದೋಕಾರಂ ದೋಷನಾಶನಂ | ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ ||' ಎಂದುದು, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವಿನ ವಚನವು.