Index   ವಚನ - 37    Search  
 
ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ. ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿರ್ದರೆ ಕೇಳಿರಿ. ಪಾದೋದಕವೆ ಪರಾತ್ಪರಾನಂದವು. ಆ ಆನಂದವೆ ಚಿದ್ಬಿಂದು; ಆ ಚಿದ್ಬಿಂದುವೆ ಪಾದೋದಕ. ಆ ಪಾದೋದಕವ ಶ್ರೀಗುರು ಲಿಂಗ ಜಂಗಮದ ದ್ವಿಪಾದದ ಭ್ರೂಮಧ್ಯಸ್ಥಾನದಲ್ಲಿರ್ದುದನರಿದರ್ಚಿಸಿದ ಪರಿಣಾಮವೆ ಚಿದಾನಂದಬಿಂದು ತೊಟ್ಟಿಟ್ಟುದೆ ಪಾದೋದಕವು. ಈ ಭೇದವನರಿದು ಕೊಳಬಲ್ಲರೆ ಪಾದೋದಕವೆನಬಹುದು. ಇದನರಿಯದೆ ಕೆರೆ ಬಾವಿ ಹಳ್ಳ ಹೊಳೆ ಚಿಲುಮೆ ನೀರ ತಂದು ಮನೆಗೆ ಬಂದಲ್ಲಿ ಅಗ್ಗಣಿಯೆಂಬಿರಿ. ಜಂಗಮದ ಪಾದದ ಮೇಲೆರದರೆ ತೀರ್ಥವೆಂಬಿರಿ. ತೀರ್ಥವೆಂದುಕೊಂಡು ತೃಷೆಯನಡಗಿಸಿ, ಕಡೆಯಲ್ಲಿ ಮೂತ್ರವ ಬಿಟ್ಟುಬಂದೆವು ಹೊರಗಗ್ಗಣಿಯ ತನ್ನಿ ಎಂಬ ಜಲವು ತೀರ್ಥವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ. ಇವರಿಬ್ಬರ ನಡತೆ ಎಂತಾಯಿತ್ತೆಂದಡೆ: ಎಕ್ಕಲ ಅಮೇಧ್ಯವ ತಿಂದು ಒಂದರ ಮೋರಿಯ ಒಂದು ಮೂಸಿ ನೋಡಿದಂತಾಯಿತ್ತೆಂದಾತ, ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.