ಇಷ್ಟಲಿಂಗವೆ ಅನಾದಿಯು, ಪ್ರಾಣಲಿಂಗವೆ ಆದಿಯು.
ಇದು ಮಾರ್ಗಕ್ರೀಯೆನಿಸುವುದು.
ಪ್ರಾಣಲಿಂಗವೆ ಅನಾದಿಯು, ಇಷ್ಟಲಿಂಗವೆ ಆದಿಯು.
ಇದು ಮೀರಿದ ಕ್ರಿಯಾಮಾರ್ಗವೆನಿಸುವುದು.
ಈ ಉಭಯದ ಭೇದವ ಸದ್ಗುರು ಮುಖದಿಂ ತಿಳಿದು,
ಆದಿ ಅನಾದಿಯೆಂಬ ಉಭಯವನುಳಿದು,
ಒಂದೇ ಪರಾತ್ಪರ ವಸ್ತುವೆಂದು ಅರಿದು,
ಸಮಭಾಜನದಿಂದ ಪ್ರಸಾದಕ್ಕೆ ಪ್ರಸಾದವನರ್ಪಿಸಿ,
ಪಾದೋದಕಕ್ಕೆ ಪಾದೋದಕವನರ್ಪಿಸಿ,
ತಾನುಭಯಮಧ್ಯದಲ್ಲಿ ಭಾವಲಿಂಗರೂಪದಿಂದ
ಪರಿಣಾಮಪಾದೋದಕ ಪ್ರಸಾದವನಪ್ಪಿ ಅಗಲದಿಪ್ಪಾತನೆ
ಮಹಾಶಿವಕಲಾಚೈತನ್ಯ ನಿಜಪ್ರಸಾದಿ ನೋಡಾ.
ಭಕ್ತ ಜಂಗಮವೆಂಬ ಉಭಯಭಾವವಳಿದು,
ದುರ್ಮಾರ್ಗ ಅನಾಚಾರ ಅಜ್ಞಾನವ ತ್ಯಜಿಸಿ,
ಶರಣಗಣಂಗಳು ಹೋದ ಮಾರ್ಗವನರಿದು,
ಉಭಯಭಾವವಳಿದು,
ಸತ್ಕ್ರಿಯಾ ಸಮ್ಯಜ್ಞಾನ ಸಮರಸಾನಂದವನರಿದು,
ಜಂಗಮದ ತೀರ್ಥಪ್ರಸಾದವ ಜಂಗಮಕ್ಕರ್ಪಿಸಿ,
ಲಿಂಗತೀರ್ಥಪ್ರಸಾದವ ಲಿಂಗಕ್ಕರ್ಪಿಸಿ,
ಉಭಯಸಂಬಂಧದಾಚರಣೆಯ ತಿಳಿದು,
ಅಂಗಲಿಂಗವೆಂಬ ಉಭಯವನಳಿದು,
ಅಂಗಲಿಂಗವಾದುದೊಂದೆ ವಸ್ತುವೆಂದರಿದು,
ಕೊಟ್ಟು ಕೊಳಬಲ್ಲಾತನೆ ಮಹಾಪ್ರಸಾದಿ ನೋಡಾ.
ಇದನರಿಯದೆ ಕೊಟ್ಟು, ಕೊಂಡು ಪಾದೋದಕ ಪ್ರಸಾದವ
ಬಹಿರಂಗಕ್ಕಿಕ್ಕಿ ಅಹಂಕರಿಸುವ ಮೂಳರಿಗೆ
ಮಹಾಪ್ರಸಾದವಿಲ್ಲ ಕಾಣಾ.
ಅವರಿಗೆ ರೌರವನರಕ ತಪ್ಪದು ನೋಡಾ.
ಅದರಿಂದ ನಿನ್ನ ನೀನರಿದು, ನಿನ್ನ ನಿಜವ ನೀ ತಿಳಿದು,
ಭೋಗಿಸೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Iṣṭaliṅgave anādiyu, prāṇaliṅgave ādiyu.
Idu mārgakrīyenisuvudu.
Prāṇaliṅgave anādiyu, iṣṭaliṅgave ādiyu.
Idu mīrida kriyāmārgavenisuvudu.
Ī ubhayada bhēdava sadguru mukhadiṁ tiḷidu,
ādi anādiyemba ubhayavanuḷidu,
ondē parātpara vastuvendu aridu,
samabhājanadinda prasādakke prasādavanarpisi,
pādōdakakke pādōdakavanarpisi,
tānubhayamadhyadalli bhāvaliṅgarūpadinda
pariṇāmapādōdaka prasādavanappi agaladippātane
mahāśivakalācaitan'ya nijaprasādi nōḍā.
Bhakta jaṅgamavemba ubhayabhāvavaḷidu,
Durmārga anācāra ajñānava tyajisi,
śaraṇagaṇaṅgaḷu hōda mārgavanaridu,
ubhayabhāvavaḷidu,
satkriyā samyajñāna samarasānandavanaridu,
jaṅgamada tīrthaprasādava jaṅgamakkarpisi,
liṅgatīrthaprasādava liṅgakkarpisi,
ubhayasambandhadācaraṇeya tiḷidu,
aṅgaliṅgavemba ubhayavanaḷidu,
aṅgaliṅgavādudonde vastuvendaridu,
koṭṭu koḷaballātane mahāprasādi nōḍā.
Idanariyade koṭṭu, koṇḍu pādōdaka prasādava
bahiraṅgakkikki ahaṅkarisuva mūḷarige
mahāprasādavilla kāṇā.Avarige rauravanaraka tappadu nōḍā.
Adarinda ninna nīnaridu, ninna nijava nī tiḷidu,
bhōgisendāta nim'ma śaraṇa,
cennayyapriya nirmāyaprabhuve.