Index   ವಚನ - 12    Search  
 
ನಾದಬಿಂದುಕಳಾತೀತಲಿಂಗವನು, ಒಬ್ಬ ಪುರುಷನು ಉನ್ಮನಿಯ ಬಾಗಿಲ ಮುಂದೆ ನಿಂದು ಜಂಗಮರೂಪಿನಿಂದ ಲಿಂಗಧ್ಯಾನ ಮಹಾಧ್ಯಾನಮಂ ಮಾಡಿ, ಪಶ್ಚಿಮದಿಕ್ಕಿನಲ್ಲಿ ನಿಂದು ಚಿತ್ರಿಕನಾಗಿ ಎರಡು ಕಮಲಂಗಳ ರಚಿಸಿ, ಅಷ್ಟಕುಳಪರ್ವತದ ಮೇಲೆ ಲಿಂಗಾರ್ಚನೆಯಂ ಮಾಡಿ, ನವಸ್ಥಲದ ಗುಡಿಯ ಶಿಖರವಿಡಿದಿರಲು, ಒಸರುವ ಕೆರೆಬಾವಿಗಳು ಬತ್ತಿದವು ನೋಡಾ! ಸಪ್ತದ್ವೀಪಂಗಳ ರಚಿಸಿದ ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ! ಆ ಲಿಂಗದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ದ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆ,ಮಹೇಶ್ವರನೆಂಬ ಹರಿವಾಣ, ಪ್ರಸಾದಿಯೆಂಬ ನೈವೇದ್ಯ, ಪ್ರಾಣಲಿಂಗಿಯೆಂಬ ತೈಲ, ಶರಣನೆಂಬ ಮೇಲೋಗರ, ಐಕ್ಯನೆಂಬ ಭೋಜಿಯನು ಆ ಲಿಂಗಕ್ಕೆ ತೃಪ್ತಿಯನೆಯ್ದಿಸಿ, ಮನಜ್ಞಾನವೆ ವೀಳ್ಯೆಯ, ಸುಜ್ಞಾನವೆ ಅಡಕಿ, ಪರಮಜ್ಞಾನವೆ ಸುಣ್ಣ, ಮಹಾಜ್ಞಾನವೆ ತಾಂಬೂಲ, ಅಜಾಂಡಬ್ರಹಾಂಡ್ಮವೆ ಕುಕ್ಷಿ, ಅಲ್ಲಿಂದತ್ತ ಮಹಾಲಿಂಗದ ಬೆಳಗು, ಸ್ವಯಾನಂದದ ತಂಪು, ನಿರಂಜನದ ಸುಖ, ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ ಓಂ ನಮಃ ಓಂ ನಮಃ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.