ಬ್ರಹ್ಮವಿಷ್ಣುರುದ್ರಾದಿಗಳಿಲ್ಲದಂದು,
ಈಶ್ವರಸದಾಶಿವ ಪರಶಿವರಿಲ್ಲದಂದು,
ನಾದಬಿಂದುಕಲಾತೀತವಿಲ್ಲದಂದು,
ಇಂತಿರ್ದ ಬ್ರಹ್ಮವು ತಾನೇ ನೋಡಾ!
ಆ ಬ್ರಹ್ಮದ ಚಿದ್ವಿಲಾಸದಿಂದ ಒಬ್ಬ ಶಿವನಾದ.
ಆ ಶಿವನಿಂಗೆ ವದನ ಒಂದು, ನಯನ ಮೂರು,
ಹಸ್ತ ಆರು, ಮೂವತ್ತಾರು ಪಾದಂಗಳು.
ಒಂಬತ್ತು ಬಾಗಿಲ ಮನೆಯೊಳಗೆ ಸುಳಿದಾಡುವ ಗಾರುಡಿಗನು.
ಕಡೆಯ ಬಾಗಿಲ ಮುಂದೆ ನಿಂದು ನಾಗಸ್ವರದ ನಾದವ ಮಾಡಲು
ಆ ನಾಗಸ್ವರವ ಕೇಳಿ ನಾಭಿಮಂಡಲದಿಂದ ಎದ್ದ ಸರ್ಪನು,
ಸಪ್ತೇಳು ಸಾಗರಂಗಳ ದಾಂಟಿ, ಅಷ್ಟಕುಲಪರ್ವತಂಗಳ ದಾಂಟಿ,
ಚತುರ್ದಶ ಭುವನಂಗಳ ಮೀರಿ ನಿಂದ.
ಸರ್ಪನ ತಲೆಯ ಮೇಲೆ ಒಂದು ರತ್ನವಿಹುದು ನೋಡಾ!
ಆ ರತ್ನದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ
ಬೆಳಗು ನೋಡಾ!
ಒಂದು ಶಿವಾಲಯಕ್ಕೆ ಆರು ಕಂಬ, ಮೂರು ಮೇರುವೆ,
ನಿಃಶೂನ್ಯವೆಂಬ ಕಳಸವನಿಕ್ಕಿ
ಆ ಶಿವಾಲಯವ ನಿಜಬ್ರಹ್ಮಲಿಂಗವು
ಕಾಯ್ದುಕೊಂಡಿರ್ಪುದು ನೋಡಾ!
ಇದೇನು ವಿಚಿತ್ರವೆಂದು
ನಿಶ್ಚಿಂತ ನಿರಾಳವಾಸಿಯಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.