ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು.
ತಾನುತಾನೆಂಬುದು ಭಾವಕೆ ತೋರದಂದು.
ಎಂತಿರ್ದ ಬ್ರಹ್ಮವು ತಾನೇ ನೋಡಾ !
ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ.
ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ.
ಆ ಜ್ಞಾನಾತ್ಮನ ಭಾವದಿಂದ ಅಧ್ಯಾತ್ಮನಾದ.
ಆ ಅಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ.
ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ.
ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ.
ಆ ಬದ್ಧಾತ್ಮನ ಭಾವಕೆ ಭಕ್ತನಾದ.
ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ.
ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ
ಆ ಅಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ.
ಆ ಜ್ಞಾನಾತ್ಮನ ಭಾವಕೆ ಶರಣನಾದ.
ಆ ಚಿದಾತ್ಮನ ಭಾವಕೆ ಐಕ್ಯನಾದ.
ಆ ಐಕ್ಯನ ಕರಕಮಲಕೆ ಮಹಾಲಿಂಗನಾದ.
ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ.
ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ.
ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ.
ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ.
ಆ ಭಕ್ತನ ಕರಕಮಲಕೆ ಆಚಾರಲಿಂಗನಾದ.
ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ,
ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ,
ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ.
ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ
ಚಿದಾನಂದಸ್ವರೂಪವಾದನಯ್ಯ
ಝೇಂಕಾರ ನಿಜಲಿಂಗಪ್ರಭುವೆ.