ನಾದಮೂರ್ತಿಗಳು ತಮ್ಮ ನಿಲವು ಕಾಣಬಾರದಂದಿಗೆ,
ಬಿಂದುಮೂರ್ತಿಗಳು ನೆಲೆಗೊಳ್ಳದಂದಿಗೆ,
ಕಲಾಮೂರ್ತಿಗಳು ತಮ್ಮ ಪ್ರಕಾಶದೋರದಂದಿಗೆ,
ಅತ್ತತ್ತಲೆ ತಾನೇ ಲಿಂಗವಾಗಿರ್ದನಯ್ಯ.
ತನ್ನ ನೆನವಿನಿಂದ ಒಬ್ಬ ಸತಿಯಳು ಪುಟ್ಟಿದಳು ನೋಡಾ!
ಆಕೆಯ ಸಂಗದಲ್ಲಿ ಐವರು ಕನ್ನೆಯರ ಕಂಡೆನಯ್ಯ.
ಆ ಐವರು ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ
ಏಕಾರ್ತಿಯನಿಕ್ಕಿ ಪಂಚದೀಪವ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಓಂ ನಮೋಯೆಂದು
ಮಂಗಳಾರ್ತಿಯನೆತ್ತಿ ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.