Index   ವಚನ - 198    Search  
 
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.