ಊರೊಳಗೊಂದು ಮನೆಯ ಕಂಡೆನಯ್ಯ.
ಆ ಮನೆಯೊಳಗೊಂದು ಮಾಣಿಕ್ಯವ ಕಂಡೆನಯ್ಯ.
ಆ ಮಾಣಿಕ್ಯದೊಳಗೆ ಸಪ್ತೇಳುಸಾಗರಂಗಳು ಅಷ್ಟಕುಲಪರ್ವತಂಗಳು,
ಸ್ವರ್ಗ ಮರ್ತ್ಯ ಪಾತಾಳ, ಈರೇಳುಭುವನ ಹದಿನಾಲ್ಕುಲೋಕಂಗಳು
ಆ ಮಾಣಿಕ್ಯದ ಬೆಳಗಿನೊಳಗೆ ಇಪ್ಪವು ನೋಡಾ.
ಗಗನದ ತುಟ್ಟ ತುದಿಯ ಮೇಲೆ ಇರುವ ಹಂಸನು
ಆ ಮಾಣಿಕ್ಯವ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ