ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ.
ಆ ಶಿವಶರಣನ ಅಂತರಂಗದಲ್ಲಿ
ಮೂವರು ಕಂಡಿಕಾರರು ಇಪ್ಪರು ನೋಡಾ.
ಆರುಮಂದಿ ಪೂಜಾರಿಗಳು,
ಆರುಲಿಂಗಾರ್ಚನೆಯ ಮಾಡುತಿಪ್ಪರು ನೋಡಾ.
ಏಕೋಭಾಮಿನಿಯೆಂಬ ಸತಿಯಳು
ನವರತ್ನದ ಹರಿವಾಣಂಗಳಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಓಂ ನಮೋ ಓಂ ನಮೋ ಓಂ ನಮೋ ಎಂದು
ಬೆಳಗುತಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.