ಈ ಧರೆಯ ಮೇಲೆ ಭಕ್ತರೆಂದು
ಗುರು ಲಿಂಗ ಜಂಗಮಕ್ಕೆ ನಡೆವರಯ್ಯ.
ಬಹಿರಂಗದ ಬಳಕೆಯನಳಿದು
ಶಬ್ದಮುಗ್ಧನಾದರೆ, ಗುರುವೆಂಬೆನಯ್ಯ.
ಭ್ರಾಂತಿಸೂತಕವನಳಿದು ನಿಭ್ರಾಂತನಾದರೆ, ಲಿಂಗವೆಂದೆಂಬೆನಯ್ಯ.
ವಿಷಯವ್ಯಸನಗಳನಳಿದು ಶುದ್ಧ ಸಿದ್ಧ ಪ್ರಸಿದ್ಧವಾದರೆ, ಜಂಗಮವೆಂದೆಂಬೆನಯ್ಯ.
ಇಂತೀ ಗುರು ಲಿಂಗ ಜಂಗಮವನರಿತು
ಆ ಗುರು ಲಿಂಗ ಜಂಗಮಕ್ಕೆ ನಡೆಯಬಲ್ಲಾತನೆ
ನಿರ್ಮಲಸ್ವರೂಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.