ಒಂದು ಲಿಂಗಕ್ಕೆ ಮುನ್ನೂರು ಮುಖ,
ಆರುಸಾವಿರ ಹಸ್ತ, ಮೂವತ್ತಾರು ಲಕ್ಷ ಪಾದಂಗಳು,
ನವಕೋಟಿ ಮನೆಗಳಲ್ಲಿ ಸುಳಿದಾಡುತಿಪ್ಪನು ನೋಡಾ.
ಆ ನವಕೋಟಿಬಾಗಿಲ ಮುಚ್ಚಿ ನೋಡಲು,
ಕಡೆಯ ಬಾಗಿಲಲ್ಲಿ ಕಪ್ಪೆ ಕುಳಿತು ಕೂಗುತ್ತಿದೆ ನೋಡಾ.
ಆ ಕೂಗಿನ ಶಬ್ದವ ಕೇಳಿ, ಪಾತಾಳಲೋಕದಲ್ಲಿಪ್ಪ ಸರ್ಪನೆದ್ದು,
ಆ ಕಪ್ಪೆಯ ನುಂಗಿ, ತನ್ನ ಸುಳುವ
ತಾನೇ ತೋರುತಿಪ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.