Index   ವಚನ - 976    Search  
 
ಎನ್ನ ಹೃದಯಕಮಲ ಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ ಎನ್ನ ಕ್ಷಮೆಯೆ ಅಭಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದ ಮಾಲೆ, ಎನ್ನ ಸಮಾಧಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ, ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ, ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ, ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ, ಎನ್ನ ಮೌನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ, ಎನ್ನ ಶುದ್ಧಿಯೆ ನಮಸ್ಕಾರ, ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು. ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣಲಿಂಗ ಪೂಜೆಯ ಮಾಡಿ ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.