ವಚನ - 979     
 
ಎರಡು ನೇತ್ರ ಒಂದಾದ ಭಾಳನೇತ್ರವು ಇಷ್ಟಲಿಂಗದ ಗೋಳಕಕ್ಕೆ ಕೂಟವು. ಒಂದು ಲಿಂಗ ಎರಡಾದುದೆ ಇಷ್ಟ ಪ್ರಾಣಲಿಂಗವು. ಆ ಪ್ರಾಣಲಿಂಗದ ಹಸ್ತಂಗಳಿಗೆರಡು ನೇತ್ರಂಗಳೆ ಕುಚಂಗಳು, ಆ ಕುಚಂಗಳು ಹಿಡಿಯಲಿಕೆ, ಈ ಕುಚವೆರಡು ಗುಹ್ಯ ಒಂದು ಕೂಡಿ ತ್ರಿಕೂಟವೆಂಬ ಹೆಸರಾಯಿತ್ತು. ಆ ತ್ರಿಕೂಟವೆಂಬ ಶಾಂಭವಪುರದ ಮಧ್ಯದಲ್ಲಿ ಜ್ಯೋತಿರ್ಲಿಂಗವೇಕವಾದ ಬಳಿಕ, ತನುತ್ರಯದ ವಿಕಾರವ ಹೊದ್ದಲಾಗದು. ವಿಕಾರವ ಹೊದ್ದಿದರೆ ಮೀಸಲೋಗರವ ಶುನಿಮುಟ್ಟಿದಂತಾಯಿತ್ತು. ಆ ಜೀವಾತ್ಮಪದಾರ್ಥವು ಲಿಂಗಕ್ಕೆ ಸಲ್ಲದು, ಅವರ ತೆರನೆಂತಾಯಿತ್ತೆಂದಡೆ, ಜನ್ಮದಾರಿದ್ರನು ನಿಕ್ಷೇಪವಂ ಕಂಡು ಹೋಗಲಾಗಿ ದಿಗಿಲುಬಿದ್ದು ಸತ್ತಂತಾಯಿತ್ತು. ಅಂಥ ನಿರ್ಭಾಗ್ಯ ದುರ್ಮರಣನ ಕಂಡು ಹೇಸಿ, ತಮ್ಮ ತನುತ್ರಯವಿಕಾರಮಂ ಪೊರ್ದದೆ, ಲಿಂಗ ನಿಕ್ಷೇಪದಲ್ಲಿ ನಿರಂಗವಾಗಿ, ಮನ್ಮಥರತಿಯೆಂಬ ನರಕವ ಬೀಳದೆ, ಅಕ್ಷಯಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.