ವಚನ - 57     
 
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ? ಅದೆಂತೆಂದಡೆ: ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯಿಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನವಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು: ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ: ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ; ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ! ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.