ವಚನ - 309     
 
ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ : ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇದಕ್ಕೆ ಸಾಕ್ಷಿ; ಪರಮರಹಸ್ಯೇ- ಲಿಂಗಾಚಾರಸ್ಸದಾಚಾರಶ್ಶಿವಾಚಾರಸ್ತಥೈವಚ! ಭೃತ್ಯಾಚಾರೋ ಗಣಾಚಾರಃ ಪಂಚಾಚಾರಃ ಪ್ರಕೀರ್ತಿತಃ || ಗುರೂಣಾ ದತ್ತಲಿಂಗಂಚ ನಾಸ್ತಿ ದೈವಂ ಮಹೀತಲೇ | ಇತಿ ಭಾವಾನುಸಂಧಾನೋ ಲಿಂಗಾಚಾರಸ್ಸಮುಚ್ಯತೇ || ಧರ್ಮಾರ್ಜಿತವಿತ್ತೇನ ತೃಪ್ತಿಶ್ಚ ಕ್ರಿಯತೇ ಸದಾ | ಗುರುಜಂಗಮಲಿಂಗಾನಾಂ ಸದಾಚಾರಃ ಪ್ರಕೀರ್ತಿತಃ || ಅವಿಚಾರೇಷು ಭಕ್ತೇಷು ಜಾತಿಧರ್ಮಾದಿ ಸೂತಕಾನ್ | ತದ್ಗೃಹೇಷ್ವನ್ನಪಾನಾದಿ ಭೋಜನಂ ಕ್ರಿಯತೇ ಸದಾ || ತಚ್ಫಿವಾಚಾರಮಿತ್ಯಾಹುರ್ವೀರಶೈವಪರಾಯಣಾ | ಶಿವಭಕ್ತಜನಾ ಸರ್ವೇ ವರಿಷ್ಠಾಃ ಪೃಥಿವೀತಲೇ || ತೇಷಾಂ ಭೃತ್ಯೋಹಮಿತ್ಯೇತದ್ಭೃತ್ಯಾಚಾರಸ್ಸ ಉಚ್ಯತೇ | ಗುರುಲಿಂಗ ಜಂಗಮಶ್ಚೈವ ಪಾದತೀರ್ಥಃ ಪ್ರಸಾದತಃ | ಇತಿ ಪಂಚಸ್ವರೂಪೋ[s]ಯಹಂ ಗಣಾಚಾರಃ ಪ್ರಕೀರ್ತಿತಃ || ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ.