ವಚನ - 379     
 
ಸಂಸಾರವ ನಿರ್ವಾಣವ ಮಾಡಿ, ಮನವ ವಜ್ರತುರಗವ ಮಾಡಿ, ಜೀವವ ರಾವುತನ ಮಾಡಿ, ಮೇಲಕ್ಕೆ ಉಪ್ಪರಿಸಲೀಯದೆ, ಮುಂದಕ್ಕೆ ಮುಗ್ಗರಿಸಲೀಯದೆ ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ, ಮೋಹರವಾಗಿದ್ದ ದಳದ ಮೇಲೆ, ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ, ಧವಳ ಬಣ್ಣದ ಕೆಸರುಗಲ್ಲ ಮೆಟ್ಟಿ ತೊತ್ತಳದುಳಿವುತ್ತಿಪ್ಪುದಿದಾರಯ್ಯ. ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿಯ ಮಾಣಿಕ್ಯ ಥಳಥಳನೆ ಹೊಳೆವ ಪ್ರಜ್ವಲಿತವ ಕಾಣದೆ ಹಳಹಳನೆ ಹಳಚುತ್ತಪ್ಪುದಿದಾರಯ್ಯ? ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ ಆಧಾರಸ್ಥಾನದ ಇಂಗಳಮತ್ತೊಂದು ಬಂದು ಪರಿಣಾಮವೆಂಬ ಧೂಪವನಿಕ್ಕಿ ವಾಯುವಿನ ಸಂಭಂದವನರಿಯದೆ ವಾಯುವ ಮೇಲಕ್ಕೆತ್ತಲು, ಗಗನಕ್ಕೆ ತಾಗುವುದು ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ ಮರಸಿದ ಮಾಣಿಕ್ಯವ ಕಾಣಬಹುದು. ಇದನಾರು ಬಲ್ಲರೆಂದರೆ: ಹಮ್ಮಳಿದು, ಇಹಪರವನರಿದು, ಪಂಚೇಂದ್ರಿಯದ ಇಂಗಿತವನರಿದ ಶರಣ ಬಲ್ಲ; ಅಂತಲ್ಲದ ಈ ಪ್ರಾಣ ಘಾತವ ಮಾಡುವರೆತ್ತಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಯ್ಯಾ,?