Index   ವಚನ - 9    Search  
 
ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ; ಕಾಳಾಮುಖಿಯಲ್ಲ; ಪಾಶುಪತಿಯಲ್ಲ; ಈ ಷಡುದರುಶನಂಗಳಾಚರಣೆಯಲ್ಲ. ಶರಣನಾಚರಣೆ ಬೇರೆ. ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ, ಪ್ರವರಶೈವ, ಅಂತ್ಯ ಶೈವವೆಂಬ ಈ ಆರು ಶೈವದ ನೀತಿಯಲ್ಲ. ಇಂತಿವೆಲ್ಲರ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತ. ಶುದ್ಧ, ವಿಶೇಷ, ನಿರ್ವಾಣವೆಂದು ವೀರಶೈವ ಮೂರು ತೆರನಾಗಿಪ್ಪುದು. ಆ ಮೂರು ತಾನೆ ಆರು ತೆರನಾಗಿ ತೋರಿತ್ತದೆಂತೆಂದೊಡೆ: ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು. ಇಂತೀ ಆರು ಪ್ರಕಾರದಲ್ಲಿ ವರ್ತಿಸುತ್ತಿಹುದು ವೀರಶೈವ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.