Index   ವಚನ - 8    Search  
 
ಅನಾದಿಗಣೇಶ್ವರನ ಶಿಷ್ಯ ಆದಿಗಣೇಶ್ವರ. ಆದಿಗಣೇಶ್ವರನ ಶಿಷ್ಯ ನಿರ್ಮಾಯನೆಂಬ ಗಣೇಶ್ವರ. ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ. ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರನು. ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮಗಣೇಶ್ವರನು. ಆತ್ಮಗಣೇಶ್ವರನ ಶಿಷ್ಯರು ಅಧ್ಯಾತ್ಮಗಣೇಶ್ವರ. ಅಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ. ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು. ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು. ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು. ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿಯ ಗೋಸಲದೇವರು. ಹರದನಹಳ್ಳಿಯ ಗೋಸಲದೇವರ ಶಿಷ್ಯರು ಶಂಕರದೇವರು. ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು. ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು. ಚೆನ್ನಬಸವೇಶ್ವರದೇವರ ಕರಕಮಲದಲ್ಲಿ ಉತ್ಪತ್ತಿಯಾದ ಶಿಶು ಸಿದ್ಧಲಿಂಗ ನಾನಯ್ಯ. ಹೀಂಗೆ ಅನಾದಿವಿಡಿದು ಬಂದ ಗುರು ಅನಾದಿವಿಡಿದು ಬಂದ ಲಿಂಗ ಅನಾದಿವಿಡಿದು ಬಂದ ಜಂಗಮ ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ ಅನಾದಿವಿಡಿದು ಬಂದ ಪಾದೋದಕ ಪ್ರಸಾದ ಅನಾದಿವಿಡಿದು ಬಂದ ಭಕ್ತಿ ಜ್ಞಾನ ವೈರಾಗ್ಯ ಅನಾದಿ ಸಂಸಿದ್ಧವಾದ ವೀರಶೈವಾಚಾರ ಸಂಪತ್ತು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.