Index   ವಚನ - 37    Search  
 
ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ, ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರು ಪ್ರಕಾರ. ಸ್ವರಾಕ್ಷರವೆಲ್ಲ ನಾದ ಸಂಬಂಧ. ವಿಕಲಾಕ್ಷರವೆಲ್ಲ ಬಿಂದು ಸಂಬಂಧ. ವ್ಯಾಪಕಾಕ್ಷರವೆಲ್ಲ ಕಳಾ ಸಂಬಂಧ. ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ. ಈ ನಾದ ಬಿಂದು ಕಳೆಗಳ ಗರ್ಬೀಕರಿಸಿಕೊಂಡಿರ್ಪುದು ಚಿತ್ತು. ಆ ಚಿತ್ ಪ್ರಣಮಸ್ವರೂಪವೆ, ಅದ್ವೈತಾನಂದದಿಂದ ಸಂಪೂರ್ಣವನುಳ್ಳ ಆದಿ ಮಹಾಲಿಂಗವು, ಅನುಪಮ ಲಿಂಗವು, ಅನಾಮಯ ಲಿಂಗವು, ಅದ್ವಯ ಲಿಂಗವು, ಪರಮ ಲಿಂಗವು, ಪರಾಪರ ಲಿಂಗವು, ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.