ಪ್ರಥಮದಲ್ಲಿ ನಿರಾಕಾರಪರವಸ್ತು ತಾನೊಂದೆ.
ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ,
ಆ ಮಹಾಜ್ಞಾನವೇ ಅನಾದಿ ಶರಣರೂಪಾಗಿ,
ಆ ನಿರಾಕಾರ ಪರವಸ್ತುವಿಗೆ ಆಧಾರವಾಗಿ,
ಚಿನ್ನ ಬಣ್ಣದ ಹಾಂಗೆ ಭಿನ್ನವಿಲ್ಲದಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?
ಆ ನಿರಾಕಾರ ಪರವಸ್ತುವೆ ನಿಃಕಲ ಲಿಂಗವಾದಲ್ಲಿ,
ಆ ನಿಃಕಲ ಲಿಂಗದಿಂದ ಜ್ಞಾನಚಿತ್ತು ಉದಯವಾಗಿ,
ಆ ಜ್ಞಾನ ಚಿತ್ತುವೆ ಶರಣ ರೂಪಾಗಿ,
ಆ ನಿಃಕಲಲಿಂಗಕ್ಕಾಶ್ರಯವಾಗಿ,
ಚಿದಂಗ ಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?
ಆ ನಿಃಕಲ ಜ್ಞಾನಚಿತ್ತುವೆ ಬಲಿದು ಚಿಚ್ಛಕ್ತಿಯಾದಲ್ಲಿ,
ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ,
ಆ ಶಾಂತ್ಯತೀತೋತ್ತರೆಯೆಂಬ ಕಲೆಯಿಂದ ನಾನು ಉದಯವಾಗಿ,
ಆ ಮಹಾಲಿಂಗಕ್ಕಾಶ್ರಯವಾಗಿ,
ಐಕ್ಯನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ಆ ಚಿಚ್ಛಕ್ತಿಯಿಂದ ಪರಶಕ್ತಿ ಉದಯವಾಗಿ,
ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ,
ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಪ್ರಸಾದ ಲಿಂಗಕ್ಕಾಶ್ರಯವಾಗಿ,
ಶರಣ ರೂಪಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ಆ ಪರಶಕ್ತಿಯಿಂದ ಆದಿಶಕ್ತಿ ಉದಯವಾಗಿ,
ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧ ಸುಜ್ಞಾನವೆಂಬ
ಜಂಗಮ ಲಿಂಗವಾದಲ್ಲಿ
ಆ ಶಾಂತಿಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಜಂಗಮ ಲಿಂಗಕ್ಕಾಶ್ರಯವಾಗಿ,
ಪ್ರಾಣಲಿಂಗಿಯಾಗಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?
ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಉದಯವಾಗಿ,
ಆ ಇಚ್ಛಾಶಕ್ತಿಯ ಸಂಗದಿಂದ ನೀನು ದಿವ್ಯ ಶಿವಲಿಂಗಾಕಾರವಾದಲ್ಲಿ
ಆ ವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಶಿವಲಿಂಗಕ್ಕಾಶ್ರಯವಾಗಿ, ಪರಮ ಪ್ರಸಾದಿಯಾಗಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ಆ ಇಚ್ಛಾಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾಗಿ
ಆ ಸುಜ್ಞಾನಶಕ್ತಿಯ ಸಂಗದಿಂದ ನೀನು ಗುರುಲಿಂಗವಾದಲ್ಲಿ
ಆ ಪ್ರತಿಷ್ಠೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಗುರುಲಿಂಗಕ್ಕಾಶ್ರಯವಾಗಿ, ಮಹೇಶ್ವರನಾಗಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ಆ ಸುಜ್ಞಾನ ಶಕ್ತಿಯಿಂದ ಕ್ರಿಯಾಶಕ್ತಿ ಉದಯವಾಗಿ,
ಆ ಕ್ರಿಯಾಶಕ್ತಿಯ ಸಂಗದಿಂದ ನೀನು ಆಚಾರ ಲಿಂಗವಾದಲ್ಲಿ
ಆ ನಿವೃತ್ತಿಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಆಚಾರಲಿಂಗಕ್ಕಾಶ್ರಯವಾಗಿ,
ಸದ್ಭಕ್ತನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ನೀ ನಿನ್ನ ಸ್ವಲೀಲೆಯಿಂದ ನಾನಾರೂಪವಾದಲ್ಲಿ
ನಿನ್ನ ಬೆಂಬಳಿವಿಡಿದು ನಾನು ನಾನಾರೂಪಗುತ್ತಿರ್ದೆನಯ್ಯಾ.
ನೀನಾವಾವ ರೂಪಾದೆ ನಾನು ಆ ಆ ರೂಪಾಗುತ್ತಿರ್ದೆನಯ್ಯಾ.
ಇದು ಕಾರಣ, ಶರಣ ಲಿಂಗವೆರಡಕ್ಕೂ ಭಿನ್ನವಿಲ್ಲವೆಂಬುದನ್ನು
ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ
ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನುಕಾರಣವೆಂದೊಡೆ;
ಶ್ರುತಜ್ಞಾನದಿಂದ ಸಂಕಲ್ಪಭ್ರಾಂತಿ ತೊಲಗದಾಗಿ,
ಈ ಷಡುಸ್ಥಲಮಾರ್ಗವನು
ದ್ವೈತಾದ್ವೈತದೊಳಗೆ ಕೂಡಲಿಕ್ಕಿ ನುಡಿಯಲಾಗದು.
ಈ ಲಿಂಗಾಂಗ ಸಂಬಂಧ ಸಮರಸೈಕ್ಯವ ತಿಳಿದ ಬಳಿಕ
ನಿತ್ಯನಿರಂಜನ ಪರತತ್ವವು ತಾನೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.