Index   ವಚನ - 50    Search  
 
ಅನಾದಿ ಭವಿಗಳಾಗಿ ಅವಾಂತರ ಭಕ್ತರಾದೆವೆಂಬವರೆಲ್ಲ ಹುಟ್ಟಿದ ಯೋನಿಯಲ್ಲಿ ಹುಟ್ಟಿ, ಮೆಟ್ಟದ ಭೂಮಿಯ ಮೆಟ್ಟಿ, ಉಣ್ಣದ ಆಹಾರವನುಂಡು, ಕಾಣದ ಕರ್ಮಂಗಳ ಕಂಡು, ಭವ ಭವದಲ್ಲಿ ಭಂಗಬಡುತಿಪ್ಪುದು ತಪ್ಪದು ನೋಡಾ. ಇದು ಕಾರಣ, ಆದಿಯಲ್ಲಿಯೂ ಭಕ್ತರು, ಅನಾದಿಯಲ್ಲಿಯೂ ಭಕ್ತರು. ಎಂದೆಂದೂ ಭಕ್ತಿಸಮರಸರಾಗಿ ಭೇದವಾದಿಗಳಲ್ಲ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.