Index   ವಚನ - 54    Search  
 
ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು ಒಂದೇ ವಸ್ತು ನೋಡಾ. ಚಿನ್ನಾದ ಸ್ವರೂಪವೇ ಜಂಗಮ. ಚಿದ್ಬಿಂದು ಸ್ವರೂಪವೇ ಲಿಂಗ. ಈ ನಾದ ಬಿಂದುವಿಂಗೆ ಆಧಾರವಾದ ಚಿತ್ಕಲಾ ಸ್ವರೂಪವೇ ಚಿನ್ಮಯ ಭಕ್ತನು ನೋಡಾ. ಶಿವಂಗೂ ಭಕ್ತಂಗೂ ಭಿನ್ನಮುಂಟೆ? ಆ ಭಕ್ತಿಗೂ ಭಕ್ತಂಗೂ ಭೇದವುಂಟೆ? ಇಲ್ಲವಾಗಿ- ದೇವ ಬೇರೆ ಭಕ್ತ ಬೇರೆ ಎಂಬ ಕರ್ಮಕಾಂಡಿಗಳ ಮತವಂತಿರಲಿ. ನಿಮ್ಮ ಶರಣರಿಗೆ ನಿಮಗೆ ಭಿನ್ನವಿಲ್ಲವೆಂದೆನು ಕಾಣಾ. ಶರಣನೇ ಸಾಕ್ಷಾತ್ ಶಿವ ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.