Index   ವಚನ - 137    Search  
 
ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ, ಪುತ್ರ ಮಿತ್ರ ಕಳತ್ರ ತ್ರಯ ಧನ ಧಾನ್ಯ ಷಡುಚಂದನಾದಿ ಭೋಗಾದಿ ಭೋಗಂಗಳ ಪಡೆದು ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ, ಕಾಯವೇ ದುಃಖದಾಗರವೆಂದು ಅರಿಯೆಯಲ್ಲ? ಕಾಯವೇ ಸಕಲ ಧರ್ಮ ಕರ್ಮಕ್ಕಾಶ್ರಯವೆಂದರಿಯೆಯಲ್ಲ? ಪುಣ್ಯ ಪಾಪವಶದಿಂದ ಸ್ವರ್ಗ ನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ? ಹುಟ್ಟುವುದು ಮಹಾ ದುಃಖ; ಹುಟ್ಟಿ ಸಂಸಾರಶರಧಿಯೊಳು ಬದುಕುವದು ದುಃಖ. ಸಾವ ಸಂಕಟವನದ ನಾನೇನೆಂಬೆನಯ್ಯಾ, ಅದು ಅಗಣಿತ ದುಃಖ. ಆವಾವ ಪರಿಯಲ್ಲಿ ತಿಳಿದು ನೋಡಲು, ಈ ಮೂರು ಪರಿಯ ದುಃಖ ಮುಖ್ಯವಾದ ಅನಂತ ದುಃಖ ನೋಡಾ. ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ, ಮಾಯಾ ಮೋಹವ ತಾಳ್ದು ಮತ್ತನಾಗಿರದೆ, ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ, ಪಂಚ ವದನನ ನೆನೆನೆನೆದು ಸಂಸಾರ ಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.