ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ ನುಂಗಿತ್ತು;
ಈರೇಳುಲೋಕ ನುಂಗಿ ಕಾಳಕೂಟ ವಿಷವನೆ
ಉಗುಳುತ್ತಿದೆ ನೋಡಾ.
ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು
`ಪಶುಪತಿ ಪಶುಪತಿ' ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು,
ಹೇಳಿಗೆ ಮುರಿಯಿತ್ತು;
ಈರೇಳುಲೋಕವ ನುಂಗಿದ ಸರ್ಪ ತಾನು ಸತ್ತಿತ್ತು.
ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.