ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ.
ಪಂಚಭೂತದ ಪ್ರಕೃತಿ ಕಾಯವ ಕಳೆದು
ಪ್ರಸಾದ ಕಾಯವ ಮಾಡಿದಿರಿಯಯ್ಯ.
ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ.
ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ.
ಅಂಗ ವಿಷಯ ಭ್ರಮೆಯ ಕಳೆದು
ಲಿಂಗ ವಿಷಯ ಭ್ರಾಂತನ ಮಾಡಿದಿರಿಯಯ್ಯ.
ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ.
ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ
ಮಾಡಿದಿರಿಯಯ್ಯ.
ಕುಲಸೂತಕ ಛಲಸೂತಕ ತನುಸೂತಕ ಮನಸೂತಕ
ನೆನಹುಸೂತಕ ಭಾವಸೂತಕವೆಂಬ
ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ
ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.