ತಂದೆಯ ಸಾಮರ್ಥ್ಯದಿಂದ ಹುಟ್ಟಿದ ಮಗನಿಗೆ
ಆ ತಂದೆಯ ಸ್ವರೂಪಲ್ಲದೆ ಬೇರೊಂದೂ ಸ್ವರೂಪೆಂದು
ತಿಳಿಯಲುಂಟೇ ಅಯ್ಯ?
ಶಿವ ತಾನೆ ತನ್ನ ಸಾಮರ್ಥ್ಯವೆ ಒಂದೆರಡಾಗಿ,
ಗುರುವೆಂದು ಶಿಷ್ಯನೆಂದು ಆಯಿತ್ತೆಂದಡೆ,
ಆ ಗುರುವಿಂಗೂ ಶಿಷ್ಯಂಗೂ ಬೇರಿಟ್ಟು ನುಡಿಯಲಾಗದಯ್ಯ.
ಗುರುವಿನ ಅಂಗವೇ ಶಿಷ್ಯ; ಶಿಷ್ಯನ ಅಂಗವೇ ಗುರು.
ಆ ಗುರುವಿನ ಪ್ರಾಣವೇ ಶಿಷ್ಯ; ಶಿಷ್ಯನ ಪ್ರಾಣವೇ ಗುರು.
ಈ ಗುರುಶಿಷ್ಯಸಂಬಂಧ ಒಂದಾದ ಬಳಿಕ
ಗುರು ಶಿಷ್ಯರೆಂದು ಬೇರಿಟ್ಟು ನುಡಿವ ಭ್ರಷ್ಟರನೇನೆಂಬೆನಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.