ಗುರುವಿನಿಂದ ಉಪದೇಶವ ಪಡೆದು,
ಗುರು ಪುತ್ರನೆನಿಸಿಕೊಂಡ ಬಳಿಕ
ಪೂರ್ವದ ತಾಯಿತಂದೆಯೆಂದು, ಬಂಧುಗಳೆಂದು,
ಮಲಸಂಬಂಧವ ನೆನೆಯಲಾಗದು ಕಾಣಿರೊ.
ಇನ್ನಿವ ನೆನೆದಿರಾದರೆ ಶಿವದ್ರೋಹ ತಪ್ಪದಯ್ಯ.
ಇನ್ನು ನಿಮಗೆ ತಾಯಿ ತಂದೆಗಳ ಹೇಳಿಹೆ ಕೇಳಿರೆ.
ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಗಳು.
ಗುರುವಿನಿಂದ ಪರವಿನ್ನಾರೂ ಇಲ್ಲವೆಂದು
ನಂಬಬಲ್ಲರೆ ಶಿಷ್ಯನೆಂಬೆನಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.