ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ ನೆನೆವ
ಭಂಡರ ಮುಖವ ನೋಡೆ, ನೋಡೆ.
ಶಿವಾಶ್ರಯವೆಂದರೆ, ಶ್ರೀ ಗುರುವಿನ ಕರಕಮಲವೆಂಬ ಪರಿ;
ಭವಾಶ್ರಯವೆಂದರೆ, ತನ್ನ ಹಿಂದಣ ತಾಯಿ ತಂದೆಗಳೆಂಬ ಪರಿ.
ಇಂತು ಗುರುಕರಜಾತನಾಗಿ, ಗುರು ಕುಮಾರನಾಗಿ,
ನರರ ಹೆಸರ ಹೇಳುವ ನರಕ ಜೀವಿಯ ಎನಗೊಮ್ಮೆ ತೋರದಿರಾ.
ತಾನು ಶುದ್ಧ ನಿರ್ಮಲನಾಗಿ ಮಲಸಂಬಂಧವ ಬೆರೆಸುವ
ಮರುಳು ಮಾನವನ ಪರಿಯ ನೋಡಾ.
ಇಂತಪ್ಪ ಅಜ್ಞಾನಿಯ ಶಿಷ್ಯನೆಂದು ಕೈವಿಡಿಯಬಹುದೆ?
ಇಂತಿವರಿಬ್ಬರ ಗುರುಶಿಷ್ಯ ಸಂಬಂಧವ ಕಂಡು
ನಾನು ಹೇಸಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.